
ಹೈದರಾಬಾದ್: ಪ್ರಿಯಕರನಿಗಾಗಿ ಪತಿಯನ್ನೇ ಕೊಂದು ನವವಿವಾಹಿತೆಯೊಬ್ಬಳು ಪರಾರಿಯಾಗಿರುವ ಭೀಕರ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ.
ತೆಲಂಗಾಣದ ಜೋಗುಳಂಬ ಗಡ್ವಾಲ್ ಜಿಲ್ಲೆಯಲ್ಲಿ ವರದಿಯಾಗಿದ್ದ ಸರ್ವೇಯರ್ ಕೊಲೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ದೊರೆತಿದ್ದು, ಈ ಕೊಲೆಗೆ ಆತನ ಪತ್ನಿಯ ವಿವಾಹೇತರ ಸಂಬಂಧವೇ ಕಾರಣ ಎಂದು ಹೇಳಲಾಗುತ್ತಿದೆ.
ಕೇವಲ ಒಂದು ತಿಂಗಳ ಹಿಂದೆ ವಿವಾಹವಾಗಿದ್ದ ಖಾಸಗಿ ಸರ್ವೇಯರ್‌ನ ಭೀಕರ ಕೊಲೆ ಮತ್ತು ಕೊಲೆಯ ಹಿಂದೆ ಅವರ ಪತ್ನಿ, ಆಕೆಯ ತಾಯಿ ಮತ್ತು ಅವರ ಪತ್ನಿಯ ಗೆಳೆಯನ ಕೈವಾಡವಿದೆ ಎಂದು ಬಹಿರಂಗಗೊಂಡಿದೆ.
ಪ್ರಾಥಮಿ ಪೊಲೀಸ್ ತನಿಖೆಯಲ್ಲಿ ಕೊಲೆಗೆ ಪ್ರಮುಖ ಕಾರಣ ಮದುವೆಗೆ ಮೊದಲು ಪತ್ನಿಯ ಅಕ್ರಮ ಸಂಬಂಧ ಎಂದು ಬಹಿರಂಗಗೊಂಡಿರುವುದರಿಂದ, ಈ ಪ್ರಕರಣವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ವರದಕ್ಷಿಣೆ ಕುರಿತ ನಾಟಕ, ನಂತರದ ಮದುವೆ ಮತ್ತು ಅಂತಿಮವಾಗಿ ಕ್ರೂರ ಕೊಲೆಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.
ಪ್ರೀತಿ, ಮದುವೆ, ಹಳೆಯ ಸಂಬಂಧ: ಏನಿದು ಘಟನೆ?
ಜೋಗುಳಂಬ ಗಡ್ವಾಲ್ ಜಿಲ್ಲೆಯ 32 ವರ್ಷದ ತೇಜೇಶ್ವರ್ ಖಾಸಗಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದರು. ಇದೇ ವರ್ಷ ಫೆಬ್ರವರಿ 13 ರಂದು ಆಂಧ್ರಪ್ರದೇಶದ ಕರ್ನೂಲ್‌ನ ಐಶ್ವರ್ಯ ಎಂಬಾಕೆಯನ್ನು ತೇಜೇಶ್ವರ್ ವಿವಾಹವಾಗಿದ್ದರು. ಮದುವೆಗೆ ಕೇವಲ ಐದು ದಿನ ಬಾಕಿ ಇದೆ ಎನ್ನುವಾಗಲೇ ಐಶ್ವರ್ಯ ಹಠಾತ್ ನಾಪತ್ತೆಯಾಗಿದ್ದರು.
ಈ ವೇಳೆ ಕರ್ನೂಲಿನ ಪ್ರಮುಖ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಂದಿಗೆ ಆಕೆಗೆ ಸಂಬಂಧವಿದೆ ಮತ್ತು ಆಕೆ ಅವನೊಂದಿಗೆ ಓಡಿಹೋಗಿದ್ದಾಳೆಂದು ಎಲ್ಲರೂ ಭಾವಿಸಿದ್ದರು. ಆದರೆ, ಫೆಬ್ರವರಿ 16 ರಂದು, ಐಶ್ವರ್ಯ ಮನೆಗೆ ಹಿಂತಿರುಗಿ ತೇಜೇಶ್ವರ್ ಜೊತೆ ಫೋನ್‌ನಲ್ಲಿ ಮಾತನಾಡಿ ತನಗೆ ಯಾರೊಂದಿಗೂ ಸಂಬಂಧವಿಲ್ಲ ಮತ್ತು ವರದಕ್ಷಿಣೆ ವಿಷಯದಲ್ಲಿ ತನ್ನ ತಾಯಿಯ ತೊಂದರೆಗಳನ್ನು ನೋಡಲು ಸಾಧ್ಯವಾಗದ ಕಾರಣ ತಾನು ಸ್ನೇಹಿತರ ಮನೆಗೆ ಹೋಗಿದ್ದೆ ಎಂದು ಹೇಳಿದರು.
ಅಲ್ಲದೆ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಹೇಳಿದರು. ಐಶ್ವರ್ಯಾಳ ಮಾತುಗಳನ್ನು ನಂಬಿದ ತೇಜೇಶ್ವರ್ ಅವರ ಪೋಷಕರ ಆಕ್ಷೇಪಣೆಯ ಹೊರತಾಗಿಯೂ, ಅವರ ಮನವೊಲಿಸಿದರು ಮತ್ತು ಮೇ 18 ರಂದು ಐಶ್ವರ್ಯ ಅವರನ್ನು ವಿವಾಹವಾದರು.
ಮದುವೆಯಾದ 2ನೇ ದಿನವೇ ಸಮಸ್ಯೆ ಆರಂಭ
ಇನ್ನು ಐಶ್ವರ್ಯಾ ಮತ್ತು ತೇಜೇಶ್ವರ್ ಮದುವೆಯಾದ ಎರಡನೇ ದಿನದಿಂದಲೇ ದಂಪತಿಗಳ ನಡುವೆ ಜಗಳ ಆರಂಭವಾಗಿತ್ತು. ಐಶ್ವರ್ಯ ತನ್ನ ಗಂಡನನ್ನು ನಿರ್ಲಕ್ಷಿಸಿ ಯಾವಾಗಲೂ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಈ ಬಗ್ಗೆ ಪೋಷಕರಿಗೂ ಆಗಾಗ ದೂರು ಹೋಗುತ್ತಿತ್ತು.
ತೇಜೇಶ್ವರ್ ದಿಢೀರ್ ನಾಪತ್ತೆ
ಈ ಬೆಳವಣಿಗೆಗಳ ನಡುವೆಯೇ ತೇಜೇಶ್ವರ್ ದಿಢೀರ್ ನಾಪತ್ತೆಯಾಗಿದ್ದ. ಜೂನ್ 17 ರಂದು ನಾಪತ್ತೆಯಾಗಿದ್ದ ತೇಜೇಶ್ವರ್ ರನ್ನುಹುಡುಕಿಕೊಡುವಂತೆ ಸಹೋದರ ಪೊಲೀಸರಿಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದಾಗ ತೇಜೇಶ್ವರ್ ಅವರ ಶವ ಆಂಧ್ರಪ್ರದೇಶದ ಪಣ್ಯಂ ಬಳಿಯ ಸುಗಲಿಮೆಟ್ಟುವಿನಲ್ಲಿ ಪತ್ತೆಯಾಗಿತ್ತು. ಇದು ತೇಜೇಶ್ವರ್ ಅವರ ಕುಟುಂಬ ಸದಸ್ಯರಿಗೆ ಆಘಾತವನ್ನುಂಟು ಮಾಡಿತು. ತೇಜೇಶ್ವರ್ ಅವರ ಕುಟುಂಬ ಸದಸ್ಯರು ಐಶ್ವರ್ಯಾ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸುತ್ತಿದ್ದಂತೆ, ಪೊಲೀಸರು ಆಕೆ ಮತ್ತು ಆಕೆಯ ತಾಯಿ ಸುಜಾತಾ ಅವರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದರು. ಈ ತನಿಖೆಯಲ್ಲಿ ಆಘಾತಕಾರಿ ಸಂಗತಿಗಳು ಬಹಿರಂಗಗೊಂಡವು.
ಒಂದೇ ವ್ಯಕ್ತಿ ಜೊತೆ ತಾಯಿ-ಮಗಳ ಅಕ್ರಮ ಸಂಬಂಧ
ಪೊಲೀಸರು ತಮ್ಮ ಬಾಷೆಯಲ್ಲಿ ನವ ವಿವಾಹಿತೆ ಐಶ್ವರ್ಯಾ ಮತ್ತು ತಾಯಿ ಸುಜಾತಾರನ್ನು ವಿಚಾರಣೆಗೊಳಪಡಿಸುತ್ತಲೇ ಆರೋಪಿಗಳು ಸತ್ಯ ಬಾಯಿ ಬಿಟ್ಟಿದ್ದಾರೆ. ಐಶ್ವರ್ಯಾ ಅವರ ತಾಯಿ ಸುಜಾತಾ ಕರ್ನೂಲ್‌ನ ಪ್ರಮುಖ ಬ್ಯಾಂಕಿನಲ್ಲಿ ಕಸ ಗುಡಿಸುವವರಾಗಿ ಕೆಲಸ ಮಾಡುತ್ತಿದ್ದಾರೆ. ಸುಜಾತಾ ಅದೇ ಬ್ಯಾಂಕಿನ ಉದ್ಯೋಗಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಮತ್ತು ಆ ಉದ್ಯೋಗಿ ಐಶ್ವರ್ಯಾ ಅವರೊಂದಿಗೂ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ.
ತೇಜೇಶ್ವರ್ ಅವರನ್ನು ಮದುವೆಯಾದ ನಂತರವೂ ಈ ಮೂವರ ಅಕ್ರಮ ಸಂಬಂಧ ಮುಂದುವರೆದಿದ್ದು, ಫೋನ್ ದತ್ತಾಂಶದ ಆಧಾರದ ಮೇಲೆ ಐಶ್ವರ್ಯಾ ಬ್ಯಾಂಕ್ ಉದ್ಯೋಗಿಯೊಂದಿಗೆ 2,000 ಬಾರಿ ಫೋನ್‌ನಲ್ಲಿ ಮಾತನಾಡಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
ತೇಜೇಶ್ವರ್ ಕೊಲೆಗೆ ಸುಪಾರಿ ಕೊಟ್ಟ ಪತ್ನಿ-ಅತ್ತೆ
ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತೇಜೇಶ್ವರನನ್ನು ಮುಗಿಸಲು ಈ ಮೂವರು ನಿರ್ಧರಿಸಿದ್ದರು. ಅಲ್ಲದೆ ಆತನ ಆಸ್ತಿ ಐಶ್ವರ್ಯಗೆ ಸಿಗಲಿದೆ ಎಂದು ಭಾವಿಸಿ ಕೊಲೆಗೆ ಸಂಚು ರೂಪಿಸಿದ್ದರು. ತೇಜೇಶ್ವರನನ್ನು ಕೊಲ್ಲಲು ಬ್ಯಾಂಕ್ ಉದ್ಯೋಗಿ ಕೆಲವರಿಗೆ ಸುಪಾರಿ ನೀಡಿದ್ದಲ್ಲದೆ, ಅವರ ಚಾಲಕನನ್ನು ಅವರೊಂದಿಗೆ ಕಳುಹಿಸಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಸುಪಾರಿ ಪಡೆದ ದುಷ್ಟರು ಜೂನ್ 17 ರಂದು ತೇಜೇಶ್ವರನನ್ನು ಭೇಟಿಯಾಗಿದ್ದಾರೆ. 10 ಎಕರೆ ಭೂಮಿಯನ್ನು ಖರೀದಿಸುತ್ತಿರುವುದಾಗಿ ಹೇಳಿ ಅವರನ್ನು ಕಾರಿನಲ್ಲಿ ಗಡ್ವಾಲ್‌ಗೆ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯೆ ತೇಜೇಶ್ವರನ ಮೇಲೆ ಕಾರಿನಲ್ಲೇ ಚಾಕುವಿನಿಂದ ಹಲ್ಲೆ ನಡೆಸಿ, ಕತ್ತು ಸೀಳಿ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ಪಣ್ಯಂ ಬಳಿಯ ಸುಗಲಿಮೆಟ್ಟುವಿನಲ್ಲಿ ಎಸೆದು ಪರಾರಿಯಾಗಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಗಳು ಪರಾರಿ
ಇನ್ನು ತೇಜಶ್ವರ್ ಶವ ಪತ್ತೆಯಾಗಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಗಳಾದ ಬ್ಯಾಂಕ್ ಉದ್ಯೋಗಿ, ಐಶ್ವರ್ಯಾ ಮತ್ತು ಆಕೆಯ ತಾಯಿ ಸುಜಾತಾ ಮೂವರು ಪರಾರಿಯಾಗಿದ್ದರು. ಈ ಪೈಕಿ ಪೊಲೀಸರು ಕಾರ್ಯಾಚರಣೆ ನಡೆಸಿ ಐಶ್ವರ್ಯ ಮತ್ತು ಅವರ ತಾಯಿ ಸುಜಾತಾಳನ್ನು ಬಂಧಿಸಿದ್ದಾರೆ. ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ಎಂದು ನಂಬಲಾದ ಬ್ಯಾಂಕ್ ಉದ್ಯೋಗಿ ಪರಾರಿಯಲ್ಲಿದ್ದು ಆತನ ಬಂಧನಕ್ಕೂ ಬಲೆ ಬೀಸಿದ್ದೇವೆ. ಕೊಲೆಯ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement