
ನವದೆಹಲಿ: ದೆಹಲಿಯ ಜ್ಯೋತಿ ನಗರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. 19 ವರ್ಷದ ಯುವತಿಯನ್ನು 5ನೇ ಮಹಡಿಯಿಂದ ಎಸೆದು ಕೊಲ್ಲಲಾಗಿದೆ. ಬುರ್ಖಾ ಧರಿಸಿ ಬಂದ ಯುವಕ ಯುವತಿಯ ಜೊತೆ ವಾಗ್ವಾದ ನಡೆಸಿದ ನಂತರ ಆಕೆಯನ್ನು ಮಹಡಿಯಿಂದ ಕೆಳಗೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.
ಅಶೋಕ್ ನಗರ ಪ್ರದೇಶದಲ್ಲಿ ಯುವತಿಯೊಬ್ಬಳು ಮಹಡಿಯಿಂದ ಬಿದ್ದಿದ್ದಾಳೆ ಎಂಬ ಮಾಹಿತಿ ದೆಹಲಿ ಪೊಲೀಸರಿಗೆ ಸಿಕ್ಕಿತ್ತು. ಮಾಹಿತಿ ಬಂದ ತಕ್ಷಣ, ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಅದಾಗಲೇ ಗಾಯಗೊಂಡ ಬಾಲಕಿಯನ್ನು ಆಕೆಯ ತಂದೆ ತಕ್ಷಣವೇ ಜಿಟಿಬಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಾಲಕಿಯನ್ನು 19 ವರ್ಷದ ನೇಹಾ ಎಂದು ಗುರುತಿಸಲಾಗಿದೆ. ಚಿಕಿತ್ಸೆಯ ಸಮಯದಲ್ಲಿ ನೇಹಾ ಸಾವನ್ನಪ್ಪಿದ್ದಾಳೆ. ಮೊದಲಿಗೆ ಇದನ್ನು ಅಪಘಾತವೆಂದು ಪರಿಗಣಿಸಲಾಗಿತ್ತು. ಆದರೆ ನೇಹಾಳ ತಂದೆ ಮಾಹಿತಿ ನೀಡಿದ ಬಳಿಕ ಈ ಇಡೀ ಪ್ರಕರಣವು ಕೊಲೆಯಾಗಿ ಮಾರ್ಪಟ್ಟಿತು.
ನೇಹಾಳ ತಂದೆಯ ಪ್ರಕಾರ, 'ನನ್ನ ಮಗಳು ನೀರು ತುಂಬಿಸಲು ಮಹಡಿಗೆ ಹೋಗಿದ್ದಳು. ಆಗ ಬುರ್ಖಾ ಧರಿಸಿದ ವ್ಯಕ್ತಿ ಮಹಡಿಯ ಮೇಲೆ ಇರುವುದನ್ನು ನಾನು ನೋಡಿದೆ. ಅವನ ಮುಖ ಕಾಣುತ್ತಿತ್ತು. ಆತ ನನ್ನ ಮಗಳ ಕತ್ತು ಹಿಸುಕುತ್ತಿದ್ದನು. ಅದನ್ನು ತಡೆಯಲು ನಾನು ಮುಂದಾದಾಗ ಆತ ಗಾಬರಿಗೊಂಡು ನನ್ನ ಮಗಳನ್ನು ಮಹಡಿಯಿಂದ ತಳ್ಳಿದನು. ನಾನು ಅವನನ್ನು ಹಿಡಿಯಲು ಪ್ರಯತ್ನಿಸಿದೆ ಆದರೆ ಅವನು ನನ್ನನ್ನೂ ತಳ್ಳಿ ಓಡಿಹೋದನು ಎಂದು ಹೇಳಿದರು.
ತಂದೆಯ ಈ ಹೇಳಿಕೆಯು ಈ ಘಟನೆಯನ್ನು ಯೋಜಿತ ಕೊಲೆ ಎಂದು ನೇರವಾಗಿ ಸೂಚಿಸುತ್ತದೆ. ವಿಷಯದ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ, ಜ್ಯೋತಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 109(1)/351(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆಯ ಸಮಯದಲ್ಲಿ ಪೊಲೀಸರಿಗೆ ಹಲವು ಸುಳಿವುಗಳು ಸಿಕ್ಕಿದ್ದು ಅದರ ಆಧಾರದ ಮೇಲೆ ಆರೋಪಿಯನ್ನು ತೌಫಿಕ್ ಎಂದು ಗುರುತಿಸಲಾಗಿದೆ. ಆರೋಪಿಯು ಬುರ್ಖಾ ಧರಿಸಿ ನೇಹಾಳ ಮನೆಗೆ ಪ್ರವೇಶಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆಗೆ ಕಾರಣ ಸದ್ಯಕ್ಕೆ ಸ್ಪಷ್ಟವಾಗಿಲ್ಲವಾದರೂ, ನೇಹಾ ಮತ್ತು ತೌಫಿಕ್ ಒಬ್ಬರಿಗೊಬ್ಬರು ಮೊದಲೇ ಪರಿಚಯವಿತ್ತು ಎನ್ನಲಾಗಿದೆ. ಘಟನೆಯ ಬಳಿಕ ತೌಫಿಕ್ ಎಂಬ ಆರೋಪಿಯನ್ನು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ತಾಂಡಾದಿಂದ ಬಂಧಿಸಲಾಗಿದೆ.
Advertisement