
ನವದೆಹಲಿ: ಚುನಾವಣಾ ಆಯೋಗವು ಕೇಂದ್ರ ಸರ್ಕಾರದ "ಕೈಗೊಂಬೆ"ಯಾಗಿ ಮಾರ್ಪಟ್ಟಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆರೋಪಿಸಿದ್ದಾರೆ. ಅಲ್ಲದೆ ತಮ್ಮ ಪಕ್ಷವು ಚುನಾವಣೆಯಲ್ಲಿ ನಡೆಯುತ್ತಿರುವ "ಅಕ್ರಮಗಳ"ನ್ನು ಪ್ರಶ್ನಿಸುತ್ತಿದೆ. ಆದರೆ ಚುನಾವಣಾ ಆಯೋಗ ಅದನ್ನು ಕೇಳಲು ಸಿದ್ಧವಿಲ್ಲ ಎಂದು ಹೇಳಿದ್ದಾರೆ.
2024ರ ಮಹಾರಾಷ್ಟ್ರ ಚುನಾವಣೆಯಲ್ಲಿನ "ಅಕ್ರಮಗಳನ್ನು" ಬಯಲು ಮಾಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಂಕಿಅಂಶಗಳನ್ನು ಉಲ್ಲೇಖಿಸಿ ಸತ್ಯಗಳನ್ನು ಹೇಳಿದ್ದಾರೆ ಮತ್ತು ಇತರರು ಸಹ ಹಾಗೆ ಮಾಡಿದ್ದಾರೆ. ಆದರೆ ಚುನಾವಣಾ ಆಯೋಗ ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ಖರ್ಗೆ ತಿಳಿಸಿದ್ದಾರೆ.
ಇಂದು ಕಾಂಗ್ರೆಸ್ ಕೇಂದ್ರ ಕಚೇರಿ ಇಂದಿರಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಖರ್ಗೆ, "ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಿದೆ... ನಿಮ್ಮ ಬಳಿ ಒಂದು ಕೈಗೊಂಬೆ(ಇಸಿ) ಇದೆ. ಹೀಗಾಗಿ ನೀವು(ಪ್ರಧಾನಿ ನರೇಂದ್ರ ಮೋದಿ) ಚುನಾವಣೆಗಳನ್ನು ಗೆಲ್ಲುತ್ತಿದ್ದೀರಿ ಎಂದು ಹೇಳಿಕೊಳ್ಳುತ್ತೀರಿ. ಆದರೆ ನೀವು ಚುನಾವಣೆ ಗೆಲ್ಲುತ್ತಿಲ್ಲ ನಿಮ್ಮ ಯಂತ್ರ ಗೆಲ್ಲುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
"ನೀವು ಅದನ್ನು(ಇಸಿ) ನಿಮಗೆ ಬೇಕಾದಲ್ಲಿಗೆ ಹೋಗಲು ಬಿಡುತ್ತೀರಿ ಮತ್ತು ನೀವು ಬಯಸುವ ಸ್ಥಳದಲ್ಲಿ ಅದರ ಮೇಲೆ ಹಿಡಿತ ಸಾಧಿಸುತ್ತೀರಿ" ಎಂದು ಖರ್ಗೆ ವಿವಿಧ ರಾಜ್ಯಗಳಲ್ಲಿನ ಚುನಾವಣೆಗಳನ್ನು ಉಲ್ಲೇಖಿಸಿ ಹೇಳಿದರು.
"ನಾವು ಮಹಾರಾಷ್ಟ್ರದಲ್ಲಿ ಚುನಾವಣೆ ಗೆದ್ದಿದ್ದೇವೆ ಮತ್ತು ಐದು ತಿಂಗಳ ನಂತರ ಅದೇ ಸ್ಥಳದಲ್ಲಿ ಮತದಾರರ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸವಾಗಿದೆ. ಐದು ವರ್ಷಗಳಲ್ಲಿ, ಮತದಾರರ ಪಟ್ಟಿಯಲ್ಲಿ ಶೇಕಡಾ 2-3 ರಷ್ಟು ಹೆಚ್ಚಾಗುತ್ತದೆ. ಆದರೆ ಐದೇ ತಿಂಗಳಲ್ಲಿ ಶೇಕಡಾ 8 ರಷ್ಟು ಹೆಚ್ಚಳವಾಗಿದ್ದು ಹೇಗೆ?" ಎಂದು ಕಾಂಗ್ರೆಸ್ ಅಧ್ಯಕ್ಷರು ಪ್ರಶ್ನಿಸಿದರು.
"ನಾನು 13 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ ಮತ್ತು ಅನೇಕ ಚುನಾವಣೆಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಇಂತಹದ್ದನ್ನು ನಾನು ಯಾವತ್ತೂ ನೋಡಿಲ್ಲ" ಎಂದು ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ನಿರಂತರವಾಗಿ ಚುನಾವಣಾ ಅಕ್ರಮಗಳನ್ನು ಪ್ರಶ್ನಿಸುತ್ತಿದೆ. ಆದರೆ ಚುನಾವಣಾ ಆಯೋಗವು ಯಾವುದನ್ನೂ ಕೇಳಲು ಸಿದ್ಧವಿಲ್ಲ. ಏಕೆಂದರೆ ಸರ್ಕಾರ "ಎಲ್ಲೆಡೆ ನಿಯಂತ್ರಣ" ಹೊಂದಿದೆ ಎಂದು ಖರ್ಗೆ ಆರೋಪಿಸಿದರು.
"ಆರ್‌ಎಸ್‌ಎಸ್ ಜನರನ್ನು ಎಲ್ಲೆಡೆ ಇರಿಸಲಾಗಿದೆ ಮತ್ತು ಇತರರಿಗೆ ಅಲ್ಲಿ ಅವಕಾಶ ಇಲ್ಲ. ಚುನಾವಣಾ ಆಯೋಗವು ನಮ್ಮ ಮಾತನ್ನು ಕೇಳುತ್ತಿಲ್ಲ ಮತ್ತು ನಮಗೆ ಮತದಾರರ ಪಟ್ಟಿಯನ್ನು ನೀಡುತ್ತಿಲ್ಲ. ನೀವು ಅದನ್ನೂ ನಿಯಂತ್ರಿಸುತ್ತಿದ್ದೀರಿ" ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು.
Advertisement