
ಲಖನೌ: ಹೆಚ್ಚಿನ ಲೈಕ್‌ಗಳಿಸಲು "ಉತ್ತಮ ಗುಣಮಟ್ಟದ ರೀಲ್ಸ್" ಮಾಡಲು ಐಫೋನ್ ಕದಿಯುವುದಕ್ಕಾಗಿ ಇಬ್ಬರು ಅಪ್ರಾಪ್ತ ಬಾಲಕರು ಯುವಕನ ಗಂಟಲು ಸೀಳಿ, ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿ ತನಿಖೆ ಆರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಮೃತ ಶಾದಾಬ್(19) ತನ್ನ ಮಾವನ ಮದುವೆಗಾಗಿ ಬಹ್ರೈಚ್‌ನಲ್ಲಿರುವ ತನ್ನ ಪೂರ್ವಜರ ಗ್ರಾಮವಾದ ನಾಗೌರ್‌ಗೆ ಭೇಟಿ ನೀಡಿದ್ದರು.
"ಜೂನ್ 20ರ ರಾತ್ರಿ ಈ ಘಟನೆ ನಡೆದಿದೆ. ಶಾದಾಬ್ ಜೂನ್ 21 ರಂದು ಕಾಣೆಯಾಗಿದ್ದಾನೆಂದು ವರದಿಯಾಗಿದೆ. ನಂತರ ಅದೇ ದಿನ ಗ್ರಾಮದ ಹೊರಗಿನ ಪೇರಲ ತೋಟದಲ್ಲಿರುವ ಶಿಥಿಲಗೊಂಡ ಕೊಳವೆ ಬಾವಿಯ ಬಳಿ ಅವರ ಶವ ಪತ್ತೆಯಾಗಿದೆ. ಶಾದಾಬ್ ಅವರ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ, ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ಕೊಲ್ಲಲಾಗಿದೆ" ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಮಾನಂದ ಪ್ರಸಾದ್ ಕುಶ್ವಾಹ ಅವರು ತಿಳಿಸಿದ್ದಾರೆ.
ತನಿಖೆಯ ಆಧಾರದ ಮೇಲೆ, ಪೊಲೀಸರು ಶನಿವಾರ 14 ಮತ್ತು 16 ವರ್ಷದ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ.
"ವಿಚಾರಣೆಯ ಸಮಯದಲ್ಲಿ, ಇಬ್ಬರು ಹದಿಹರೆಯದವರಾಗಿದ್ದು, ಉತ್ತಮ ರೀಲ್ಸ್ ಮಾಡಲು ಗುಣಮಟ್ಟದ ಮೊಬೈಲ್ ಫೋನ್ ಅಗತ್ಯವಿತ್ತು. ಅದಕ್ಕಾಗಿ ಈ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರು ನಿರ್ದಿಷ್ಟವಾಗಿ ಶಾದಾಬ್‌ನ ಐಫೋನ್ ಅನ್ನು ಗುರಿಯಾಗಿಸಿಕೊಂಡು ನಾಲ್ಕು ದಿನಗಳ ಹಿಂದೆ ಕೊಲೆಗೆ ಯೋಜಿಸಿದ್ದಾಗಿ ಒಪ್ಪಿಕೊಂಡಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
"ಘಟನೆಯ ರಾತ್ರಿ, ಅಪ್ರಾಪ್ತರು ಶಾದಾಬ್‌ನನ್ನು ರೀಲ್ಸ್ ಮಾಡುವ ನೆಪದಲ್ಲಿ ಗ್ರಾಮದ ಹೊರಗಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ, ಅವರು ಯುವಕನ ಮೇಲೆ ದಾಳಿ ಮಾಡಿ, ಆತನ ಗಂಟಲು ಕತ್ತರಿಸಿ, ನಂತರ ತಲೆಯನ್ನು ಇಟ್ಟಿಗೆಯಿಂದ ಜಜ್ಜಿದ್ದಾರೆ" ಎಂದು ಅಧಿಕಾರಿ ಹೇಳಿದ್ದಾರೆ.
ಪೊಲೀಸರು ಶಾದಾಬ್‌ನ ಐಫೋನ್, ಕೊಲೆಗೆ ಬಳಸಿದ ಚಾಕು ಮತ್ತು ಇಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ.
ಇಬ್ಬರು ಅಪ್ರಾಪ್ತ ಆರೋಪಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ನಾಲ್ವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ(ಬಿಎನ್‌ಎಸ್) ಸೆಕ್ಷನ್ 103(1) (ಕೊಲೆ) ಮತ್ತು 238 (ಸಾಕ್ಷ್ಯಗಳನ್ನು ಮರೆಮಾಚುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement