BJP National President: ಅಧ್ಯಕ್ಷರ ಆಯ್ಕೆ ಘೋಷಣೆಗೆ ದಿನಾಂಕ ಫಿಕ್ಸ್; ಈ ಬಾರಿ BJP ಸಾರಥ್ಯ ಮಹಿಳೆ ಕೈಗೆ?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಈ ಬಾರಿ ನಾರಿಯರ ಕೈಗೆ ಬಿಜೆಪಿ ಸಾರಥ್ಯ ಸಿಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಕೇಂದ್ರದಲ್ಲಿ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ ಹೊಸ ಸಾರಥಿ ಆಯ್ಕೆಗೆ ಪ್ರಕ್ರಿಯೆಗಳು ಆರಂಭವಾಗಿದ್ದು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಕು ಯಾರಾಗುತ್ತಾರೆಂಬ ಪ್ರಶ್ನೆಗೆ ಮಾರ್ಚ್ 15 ಅಥವಾ 16ರೊಳಗೆ ಉತ್ತರ ಸಿಗಲಿದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಡೆಯಬೇಕಾದರೆ ಅದಕ್ಕೂ ಮೊದಲು, ಶೇಕಡಾ 50 ರಷ್ಟು ರಾಜ್ಯಗಳಲ್ಲಿ ಪಕ್ಷದ ಸಾಂಸ್ಥಿಕ ಚುನಾವಣೆಗಳು ಪೂರ್ಣಗೊಳ್ಳುವುದು ಅವಶ್ಯಕವಾಗಿದೆ. ಅದಕ್ಕೂ ಮೊದಲು ಬೂತ್, ಮಂಡಲ ಮತ್ತು ಜಿಲ್ಲಾ ಮಟ್ಟದ ಚುನಾವಣೆಗಳು ನಡೆಯುತ್ತವೆ.

ಪ್ರಸ್ತುತ, 36 ರಾಜ್ಯಗಳ (28 ರಾಜ್ಯ+ 8 ಕೇಂದ್ರಾಡಳಿತ ಪ್ರದೇಶ) ಪೈಕಿ 12 ರಾಜ್ಯಗಳಲ್ಲಿ ಚುನಾವಣೆಗಳು ಪೂರ್ಣಗೊಂಡಿವೆ. ಅಂದರೆ, ಘಟಕ ಮುಖ್ಯಸ್ಥರ ಚುನಾವಣೆಗಳು ಕನಿಷ್ಠ ಆರು ರಾಜ್ಯಗಳಲ್ಲಿ ನಡೆಯಬೇಕಾಗಿದೆ. ಹೀಗಾಗಿ ಪಕ್ಷವು ಈ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದೆ.

ವಿಶೇಷವಾಗಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳಲ್ಲಿ, ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗಿರುವ ಲೆಕ್ಕಾಚಾರ ಪ್ರಕಾರ ಮಾರ್ಚ್ 15ರ ಒಳಗೆ ಬಿಜೆಪಿಯ ಹೊಸ ರಾಷ್ಟ್ರೀಯ ಅಧ್ಯಕ್ಷರ ಹೆಸರು ಘೋಷಣೆಯಾಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಈ ಬಾರಿ ನಾರಿಯರ ಕೈಗೆ ಬಿಜೆಪಿ ಸಾರಥ್ಯ ಸಿಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ರಾಜ್ಯಗಳಲ್ಲಿ ಪಕ್ಷದ ಬಲವನ್ನು ಹೆಚ್ಚಿಸಲು ದಕ್ಷಿಣ ರಾಜ್ಯಕ್ಕೆ ಸೇರಿದ ಮಹಿಳಾ ನಾಯಕಿಯ ಕೈಗೆ ಬಿಜೆಪಿ ಸಾರಥ್ಯ ನೀಡಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಹಿರಿಯ ನಾಯಕಿಯೊಬ್ಬರು ಸುಳಿವು ನೀಡಿದ್ದಾರೆ.

ಸಂಗ್ರಹ ಚಿತ್ರ
ಜೆಪಿ ನಡ್ಡಾ ಭೇಟಿಯಾಗದ ಭಿನ್ನಮತೀಯ ನಾಯಕರು: ಒಗ್ಗಟ್ಟಾಗಿ ಕೆಲಸ ಮಾಡುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಸೂಚನೆ!

ಇದರಂತೆ ಅಧ್ಯಕ್ಷ ಸ್ಥಾನಕ್ಕೆ ಆಂಧ್ರಪ್ರದೇಶದ ಬಿಜೆಪಿ ಮುಖ್ಯಸ್ಥೆ ದಗ್ಗುಬಾಟಿ ಪುರಂದೇಶ್ವರಿ ಅಥವಾ ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ಮತ್ತು ಕೊಯಮತ್ತೂರು ಶಾಸಕಿ ವನತಿ ಶ್ರೀನಿವಾಸನ್ ಅವರ ಹೆಸರು ಕೇಳಿ ಬರುತ್ತಿದ್ದು, ಇಬ್ಹರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಪುರಂದೇಶ್ವರಿ ಅವರು ಕಾಂಗ್ರೆಸ್ ತೊರೆದ ನಂತರ 2014 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು, ಪಕ್ಷ ಸಂಘಟನೆಯಲ್ಲಿ ಉತ್ತಮ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಆಂಧ್ರಪ್ರದೇಶದಲ್ಲಿ ಬಿಜೆಪಿ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತಿದೆ. ಅತ್ಯುತ್ತಮ ವಾಗ್ಮಿ ಕೌಶಲ್ಯ ಮತ್ತು ಐದು ಭಾಷೆಗಳಲ್ಲಿ ನಿರರ್ಗಳತೆಯಿಂದ ಮಾತನಾಡುವ ಇವರನ್ನು ದಕ್ಷಿಣ ಭಾರತದ ಸುಷ್ಮಾ ಸ್ವರಾಜ್ ಎಂದೂ ಕರೆಯಲಾಗುತ್ತದೆ.

ಇನ್ನು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರು ಕೊಯಮತ್ತೂರಿನ ಶಾಸಕರಾಗಿದ್ದು, ಪಕ್ಷದಲ್ಲಿ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ನಂಬಿಕೆ ಗಳಿಸಿರುವ ಪಕ್ಷದ ಪ್ರಮುಖ ಮಹಿಳಾ ನಾಯಕರಲ್ಲಿ ಒಬ್ಬರಾಗಿದ್ದಾರೆಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಹೊಸ ಪದಾಧಿಕಾರಿಗಳು 50-70 ವಯಸ್ಸಿನೊಳಗಿನವರಾಗಿರುತ್ತಾರೆ. ಆರಂಭದಲ್ಲಿ ರೇಸ್ ನಲ್ಲಿ ಮನೋಹರ್ ಲಾಲ್ ಖಟ್ಟರ್ ಅವರ ಹೆಸರು ಕೇಳಿ ಬಂದಿತ್ತು. ಆದರೆ, ಅವರಿಗೆ 70 ವರ್ಷ ವಯಸ್ಸಾಗಿರುವುದರಿಂದ ನಿಯಮಗಳಂತೆ ಆಯ್ಕೆ ಮಾಡುವುದು ಸಾಧ್ಯವಾಗುವುದಿಲ್ಲ. ಪಕ್ಷವು ಶೀಘ್ರದಲ್ಲೇ ನೂತನ ರಾಷ್ಟ್ರೀಯ ಅಧ್ಯಕ್ಷರನ್ನು ಘೋಷಣೆ ಮಾಡಲಿದೆ ಮೂಲಗಳು ತಿಳಿಸಿವೆ.

ಸಂಗ್ರಹ ಚಿತ್ರ
ಈ ವರ್ಷದೊಳಗೆ ಭಾರತ TB ಮುಕ್ತವಾಗಲಿದೆ: ಕೇಂದ್ರ ಆರೋಗ್ಯ ಸಚಿವ ನಡ್ಡಾ

ಪಕ್ಷವು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿದ್ದರೆ, ಧರ್ಮೇಂದ್ರ ಪ್ರಧಾನ್ (55), ಭೂಪೇಂದ್ರ ಯಾದವ್ (55), ಮತ್ತು ವಿನೋದ್ ತಾವ್ಡೆ (61) ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಗುಜರಾತ್‌ನಲ್ಲಿ ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಈ ವಿಚಾರವನ್ನೂ ಗಮನದಲ್ಲಿಟ್ಟುಕೊಂಡು ಪಕ್ಷವು ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ. ಒಮ್ಮತದ ಮೂಲಕ ಅಂತಿಮವಾಗಿ ನಿರ್ಧಾರ ಕೈಗೊಳ್ಳುತ್ತದೆ ಆದರೂ, ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್ ಕೂಡ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಜೆಪಿ ನಡ್ಡಾ ಅವರು 2019 ರಲ್ಲಿ ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು. 2020ರ ಜನವರಿಯಲ್ಲಿ, ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಅದಕ್ಕೂ ಮೊದಲು ಪ್ರಸ್ತುತ ಗೃಹ ಸಚಿವ ಅಮಿತ್ ಶಾ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಜೆಪಿ ನಡ್ಡಾ ಅವರ ಅವಧಿಯನ್ನು 2024 ರ ಲೋಕಸಭಾ ಚುನಾವಣೆಯವರೆಗೆ ವಿಸ್ತರಿಸಲಾಯಿತು. ಅವರು ಸಚಿವ ಸಂಪುಟ ಸೇರಿದ ನಂತರ, ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಗಳನ್ನು ಪಕ್ಷವು ಹುಡುಕಾಟ ಶುರುಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com