
ಚೆನ್ನೈ: ತಮಿಳುನಾಡಿನ ಡಿಎಂಕೆ ಸರ್ಕಾರದ ಹೊಸ ಬಜೆಟ್ ಲಾಂಛನದಲ್ಲಿ ಹಿಂದಿಯ ‘₹’ ಕೈಬಿಟ್ಟಿದ್ದು, ಬದಲಿಗೆ ತಮಿಳಿನ 'ರು' (ರುಬಾಯಿ ) ಆಯ್ಕೆ ಮಾಡಿಕೊಂಡಿರುವುದನ್ನು ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಕಟುವಾಗಿ ಟೀಕಿಸಿದ್ದಾರೆ.
ಭಾರತೀಯ ‘₹’ ಒಕ್ಕೂಟ ವ್ಯವಸ್ಥೆಯದ್ದಾಗಿದೆ. ಡಿಎಂಕೆ ರಾಷ್ಟ್ರೀಯ ಚಿಹ್ನೆಗಳನ್ನು ಗೌರವಿಸಬೇಕು. ಅನೇಕ ವರ್ಷ ತಮಿಳುನಾಡನ್ನು ಆಳಿದ ಅವರು ಎಷ್ಟೋ ಬಾರಿ ಬಜೆಟ್ ಮಂಡಿಸಿದ್ದಾರೆ. ಅವರು ಯಾಕೆ ಈ ರೀತಿ ನಾಟಕವಾಡಲು ಬಯಸುತ್ತಾರೆ? ಎಂದು ಪ್ರಶ್ನಿಸಿದರು.
ಇಷ್ಟು ವರ್ಷಗಳ ಕಾಲ ಕೇಂದ್ರದಲ್ಲಿದ್ದ ಅವರು ಆ ಸಮಯದಲ್ಲಿ ಈ ನಿರ್ಧಾರವನ್ನೇಕೆ ತೆಗೆದುಕೊಳ್ಳಲಿಲ್ಲ?" ಎಂದು ಕಿಡಿಕಾರಿದ್ದಾರೆ.
ಎಎನ್ಐ ಜೊತೆಗೆ ಮಾತನಾಡಿದ ಅವರು, ನಾವು ತಮಿಳುನಾಡು ಚಿಹ್ನೆ ಅಥವಾ ಭಾಷೆಯ ವಿರುದ್ಧವಾಗಿಲ್ಲ. ನಾವು ಅದರ ಪರವಾಗಿದ್ದೇವೆ. ಆದರೆ, ಎಂಕೆ ಸ್ಟಾಲಿನ್ ಸರ್ಕಾರ ತಮ್ಮ ಸರ್ಕಾರದ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ."ನನ್ನ ಹೆಸರಿನಲ್ಲಿ ತಮಿಳರ ಹೆಸರಿದೆ. ಆದರೆ ಎಂಕೆ ಸ್ಟಾಲಿನ್ ಹೆಸರಿಲ್ಲ. ಅವರ ಹೆಸರನ್ನು ತಮಿಳರೊಂದಿಗೆ ಬದಲಾಯಿಸುತ್ತಾರಾ? ಎಂದು ವಾಗ್ದಾಳಿ ನಡೆಸಿದರು.
ನಾಳೆ ತಮಿಳುನಾಡು ವಿಧಾನಸಭೆಯಲ್ಲಿ 2025-26ನೇ ಸಾಲಿನ ಬಜೆಟ್ ಮಂಡಿಸಲು ನಿರ್ಧರಿಸಲಾಗಿದೆ. ಬಜೆಟ್‌ನ ಚಿಹ್ನೆ ಪ್ರದರ್ಶಿಸುವ ವೀಡಿಯೊವನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದ್ದು, ಇದರಲ್ಲಿ ಹಿಂದಿಯ ‘₹’ ಕೈಬಿಟ್ಟಿದ್ದು, ಬದಲಿಗೆ ತಮಿಳಿನ 'ರು' (ರುಬಾಯಿ ) ಬಳಸಿದ್ದಾರೆ. 2020 ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಪ್ರಸ್ತಾಪಿಸಲಾದ ತ್ರಿಭಾಷಾ ಸೂತ್ರದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಸಂಘರ್ಷ ನಡೆಸುತ್ತಿರುವಂತೆಯೇ ಇದೀಗ ತಮಿಳುನಾಡು ಸರ್ಕಾರ ಹೊಸ ಚರ್ಚೆ ಹುಟ್ಟುಹಾಕಿದೆ.
Advertisement