'ಇಸ್ಲಾಮಿಕ್ ಭಯೋತ್ಪಾದನೆ' ಭಾರತ, ಅಮೆರಿಕ ಎರಡಕ್ಕೂ ಅಪಾಯಕಾರಿ: ತುಳಸಿ ಗಬ್ಬಾರ್ಡ್
ನವದೆಹಲಿ: ಇಸ್ಲಾಮಿಕ್ ಭಯೋತ್ಪಾದನೆ ಅಮೆರಿಕ ಮತ್ತು ಭಾರತ ಎರಡಕ್ಕೂ ಅಪಾಯಕಾರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಬ್ಬರೂ ಈ ಬೆದರಿಕೆ ಎದುರಿಸಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರು ಸೋಮವಾರ ಹೇಳಿದ್ದಾರೆ.
ಭಾರತಕ್ಕೆ ಭೇಟಿ ನೀಡಿರುವ ಗಬ್ಬಾರ್ಡ್ ಅವರು ಇಂದು ಬೆಳಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾದರು. ಈ ವೇಳೆ ಇಸ್ಲಾಮಿಕ್ ಭಯೋತ್ಪಾದನೆ ಅಮೆರಿಕ ಮತ್ತು ಭಾರತ ಮಾತ್ರವಲ್ಲದೆ ಮಧ್ಯಪ್ರಾಚ್ಯದ ಅನೇಕ ದೇಶಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಎತ್ತಿ ತೋರಿಸಿದರು.
ಪಾಕಿಸ್ತಾನದಿಂದ ಭಾರತದ ಮೇಲೆ ಪದೇ ಪದೇ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳ ಬಗ್ಗೆ ಪ್ರತಿಕ್ರಿಯಿಸಿದ ಗಬ್ಬಾರ್ಡ್ ಅವರು, ಇಸ್ಲಾಮಿಕ್ ಭಯೋತ್ಪಾದನೆಯ ಬೆದರಿಕೆಯು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದರು.
"ಅಧ್ಯಕ್ಷ ಟ್ರಂಪ್, ತಮ್ಮ ಮೊದಲ ಆಡಳಿತದ ಅವಧಿಯಲ್ಲಿ ಮತ್ತು ಈಗ ಮುಂದುವರಿಯುತ್ತಾ, ಇಸ್ಲಾಮಿಕ್ ಭಯೋತ್ಪಾದನೆಯನ್ನು ಮಟ್ಟಹಾಕುವ ತಮ್ಮ ಬದ್ಧತೆಯ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಇದು ನಮ್ಮ ಮೇಲೆ ದೊಡ್ಡ ಪರಿಣಾಮ ಬೀರಿದೆ ಮತ್ತು ಅಮೆರಿಕದ ಜನರಿಗೆ ನೇರ ಬೆದರಿಕೆಯನ್ನು ಒಡ್ಡುತ್ತಲೇ ಇದೆ" ಎಂದು ಗಬ್ಬಾರ್ಡ್ ಹೇಳಿದ್ದಾರೆ.
"ಇದು ಭಾರತ, ಬಾಂಗ್ಲಾದೇಶ ಮತ್ತು ಪ್ರಸ್ತುತ ಸಿರಿಯಾ, ಇಸ್ರೇಲ್ ಹಾಗೂ ಮಧ್ಯಪ್ರಾಚ್ಯದ ವಿವಿಧ ದೇಶಗಳಲ್ಲಿ ಜನರ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ನಾವು ನೋಡುತ್ತೇವೆ. ಪ್ರಧಾನಿ ಮೋದಿ ಕೂಡ ಗಂಭೀರವಾಗಿ ಪರಿಗಣಿಸುವ ಬೆದರಿಕೆಯಾಗಿದೆ ಮತ್ತು ನಮ್ಮ ನಾಯಕರು ಅದರ ವಿರುದ್ಧ ಒಟ್ಟಾಗಿ ಕೆಲಸ ಮಾಡಲು ಬದ್ಧರಾಗಿದ್ದಾರೆ" ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ