
ನವದೆಹಲಿ: ಇಸ್ರೇಲ್ ವೈಮಾನಿಕ ದಾಳಿಯಿಂದ ತತ್ತರಿಸಿರುವ ಗಾಜಾದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಭಾರತ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸಂಘರ್ಷ ಪೀಡಿತ ಪ್ಯಾಲೆಸ್ಟೀನಿಯನ್ ಪ್ರದೇಶಕ್ಕೆ ನಿರಂತರ ಮಾನವೀಯ ನೆರವು ನೀಡಲು ಕರೆ ನೀಡಿದೆ.
ಇಸ್ರೇಲ್ ಮಂಗಳವಾರ ಗಾಜಾ ಮೇಲೆ ವೈಮಾನಿಕ ದಾಳಿಯನ್ನು ಪುನರಾರಂಭಿಸುತ್ತಿದ್ದಂತೆ ವಿದೇಶಾಂಗ ಸಚಿವಾಲಯದ(MEA) ಈ ಹೇಳಿಕೆ ನೀಡಿದ್ದು, ಜನವರಿಯಿಂದ ಜಾರಿಯಲ್ಲಿರುವ ಹಮಾಸ್‌ನೊಂದಿಗಿನ ದುರ್ಬಲ ಕದನ ವಿರಾಮ ಒಪ್ಪಂದದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
"ಗಾಜಾದಲ್ಲಿನ ಪರಿಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ. ತನ್ನ ವಶದಲ್ಲಿರುವ ಎಲ್ಲಾ ಒತ್ತೆಯಾಳುಗಳನ್ನು ಹಮಾಸ್ ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಭಾರತ ಒತ್ತಾಯಿಸುತ್ತದೆ" ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ನಿರಂತರ ಮಾನವೀಯ ನೆರವಿನ ಅಗತ್ಯವನ್ನು ಒತ್ತಿ ಹೇಳಿದ ವಿದೇಶಾಂಗ ಸಚಿವಾಲಯ, "ಮಾನವೀಯ ನೆರವು ನೀಡುವುದು ಸದ್ಯದ ತುರ್ತು ಅಗತ್ಯ ಎಂಬುದು ಭಾರತದ ನಿಲುವಾಗಿದೆ." ಎಂದು ಹೇಳಿದೆ.
ಇನ್ನು ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, "ಗಾಜಾದ ಜನರಿಗೆ ಮಾನವೀಯ ನೆರವು ಒದಗಿಸುವದು ಸದ್ಯದ ತುರ್ತು ಜಾಗತಿಕ ಕರ್ತವ್ಯ.." ಎಂದು ಅಭಿಪ್ರಾಯಪಟ್ಟಿದ್ದಾರೆ.
"ಪ್ಯಾಲೆಸ್ಟೈನ್‌ನ ಗಾಜಾಪಟ್ಟಿಯ ಪರಿಸ್ಥಿತಿಯ ಬಗ್ಗೆ ನಾವು ಕಾಳಜಿಯನ್ನು ಹೊಂದಿದ್ದೇವೆ. ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಗಾಜಾದ ಜನರಿಗೆ ಮಾನವೀಯ ನೆರವು ಒದಗಿಸಬೇಕಿದೆ. ಇದೇ ವೇಳೆ ಹಮಾಸ್ ತನ್ನ ವಶದಲ್ಲಿರುವ ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ.." ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
Advertisement