
ಪಾಟ್ನಾ: ಪ್ರತಿ ಮನೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ 'ಹರ್ ಘರ್ ನಲ್' ಯೋಜನೆಯಡಿ ಹಾಕಲಾದ ನಲ್ಲಿಯಲ್ಲಿ ಒಂದು ಬಕೆಟ್ ನೀರು ತರುವ ವಿಚಾರದಲ್ಲಿ ಉಂಟಾದ ಗಲಾಟೆ ಹಿಂಸಾಚಾರಕ್ಕೆ ತಿರುಗಿದ್ದು, ಅಣ್ಣನೇ ತಮ್ಮನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದ ನೌಗಾಚಿಯಾ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಅವರ ತಾಯಿ ಕೂಡಾ ಗುಂಡೇಟಿನಿಂದ ಗಾಯಗೊಂಡಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಜಗತ್‌ಪುರ ಗ್ರಾಮದಲ್ಲಿ ಬೆಳಗ್ಗೆ 7:30ರ ಸುಮಾರಿಗೆ ಈ ಘಟನೆ ನಡೆದಿದೆ. ವಿಕಲ್ ಯಾದವ್ ಎಂದೂ ಕರೆಯಲ್ಪಡುವ ವಿಶ್ವಜೀತ್ ಯಾದವ್ ಮತ್ತು ಅವರ ಅಣ್ಣ ಜಯ್ ಜೀತ್ ಯಾದವ್ ನಡುವೆ ನೀರಿನ ವಿಚಾರದಲ್ಲಿ ಗಲಾಟೆ ನಡೆದಿದೆ.
ಇದು ತಾರಕಕ್ಕೇರಿದ್ದು, ವಿಶ್ವಜೀತ್ ಬಂದೂಕು ತೆಗೆದು ಜಯ್ ಜೀತ್ ಮೇಲೆ ಗುಂಡು ಹಾರಿಸಿದ್ದಾನೆ. ಆದರೆ, ಬಂದೂಕು ಕಸಿದುಕೊಳ್ಳುವಲ್ಲಿ ಯಶಸ್ವಿಯಾದ ಜಯ್ ಜೀತ್ ಪ್ರತಿಯಾಗಿ ಗುಂಡು ಹಾರಿಸಿದ್ದು, ವಿಶ್ವಜೀತ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಮಧ್ಯಪ್ರವೇಶಿಸಿದ ಅವರ ತಾಯಿ ಹೀನಾ ದೇವಿ ಅವರಿಗೂ ಗುಂಡು ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಶ್ವಜೀತ್ ಮೃತಪಟ್ಟಿದ್ದಾರೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಓಂ ಪ್ರಕಾಶ್ ದೃಢಪಡಿಸಿದ್ದಾರೆ. ಜಯ್ ಜೀತ್ ಪೊಲೀಸ್ ಕಸ್ಟಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫೊರೆನ್ಸಿಕ್ ತಂಡವು ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದೆ.
ಸಂತ್ರಸ್ತರು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ನಿತ್ಯಾನಂದ ರೈ ಅವರ ಸೋದರಳಿಯರು ಎಂದು ವರದಿಯಾಗಿದೆ. ಅಪರಾಧಕ್ಕೆ ಬಳಸಿದ ಬಂದೂಕನ್ನು ವಶಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪರ್ಬಟ್ಟಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶಂಭು ಕುಮಾರ್ ಹೇಳಿದ್ದಾರೆ.
Advertisement