
ಪುಣೆ: ವೇತನ ಕಡಿತಗೊಳಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಚಾಲಕನೊಬ್ಬ ತಾನು ಕೆಲಸ ಮಾಡುತ್ತಿದ್ದ ಖಾಸಗಿ ಸಂಸ್ಥೆಯ ಮಿನಿಬಸ್ ಗೆ ಬೆಂಕಿ ಹಚ್ಚಿ ನಾಲ್ವರು ಉದ್ಯೋಗಿಗಳನ್ನು ಕೊಂದಿರುವ ಘಟನೆ ಪುಣೆ ಬಳಿ ನಡೆದಿದೆ.
"ಬೆಂಕಿ ಆಕಸ್ಮಿಕವಲ್ಲ. ವಿಧ್ವಂಸಕ ಕೃತ್ಯ ಎಂದು ತನಿಖೆಯಿಂದ ತಿಳಿದುಬಂದಿದೆ. ಚಾಲಕ ಕೆಲ ಸಿಬ್ಬಂದಿಯೊಂದಿಗೆ ಜಗಳವಾಡಿ, ವಿಧ್ವಂಸಕ ಕೃತ್ಯವೆಸಗಿದ್ದಾನೆ ಎಂದು ಪಿಂಪ್ರಿ ಚಿಂಚ್‌ವಾಡ್ ನ ಉಪ ಪೊಲೀಸ್ ಆಯುಕ್ತ ವಿಶಾಲ್ ಗಾಯಕ್‌ವಾಡ್ ತಿಳಿಸಿದ್ದಾರೆ.
ಕೆಲವು ಉದ್ಯೋಗಿಗಳೊಂದಿಗೆ ಜಗಳ ಮಾಡಿಕೊಂಡಿದ್ದ ಚಾಲಕ ಜನಾರ್ದನ್ ಹಂಬರ್ಡೇಕರ್ ಸೇಡು ತೀರಿಸಿಕೊಳ್ಳಲು ಬಯಸಿದ್ದ. ಅಲ್ಲದೇ ಸಂಬಳ ಕಡಿತದ ಕಾರಣ ಸಂಸ್ಥೆಯ ವಿರುದ್ಧವೂ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.
ಬಸ್ ನಲ್ಲಿ ಸಿಲುಕಿ ಸಜೀವ ದಹನವಾದ ನಾಲ್ವರಲ್ಲಿ ಆತ ದ್ವೇಷ ಸಾಧಿಸುತ್ತಿದ್ದ ನೌಕರರು ಇರಲಿಲ್ಲ ಎಂದು ಡಿಸಿಪಿ ತಿಳಿಸಿದ್ದಾರೆ.
ತನ್ನ 14 ಉದ್ಯೋಗಿಗಳನ್ನು ಕೆಲಸದ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ವ್ಯೋಮಾ ಗ್ರಾಫಿಕ್ಸ್ ಒಡೆತನದ ಬಸ್‌ಗೆ ಪುಣೆ ನಗರದ ಸಮೀಪದ ಹಿಂಜಾವಾಡಿ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಜೀನ್ (ಅತ್ಯಂತ ಉರಿಯುವ ರಾಸಾಯನಿಕ) ಖರೀದಿಸಿದ್ದ ಆರೋಪಿ, ಬಸ್ಸಿನಲ್ಲಿ ಟೋನರ್ ಒರೆಸಲು ಬಳಸುವ ಬಟ್ಟೆಯನ್ನೂ ಇಟ್ಟುಕೊಂಡಿದ್ದರು. ಗುರುವಾರ ಬಸ್ ಹಿಂಜವಾಡಿ ಬಳಿ ಬರುತ್ತಿದ್ದಂತೆ ಬೆಂಕಿಕಡ್ಡಿ ಹಚ್ಚಿ ಬಟ್ಟೆಗೆ ಬೆಂಕಿ ಹಚ್ಚಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.
ಆರೋಪಿ ಚಲಿಸುತ್ತಿದ್ದ ಬಸ್‌ನಿಂದ ಜಿಗಿದಿದ್ದಾನೆ. ನಂತರ ಅದು ಸುಮಾರು ನೂರು ಮೀಟರ್ ದೂರ ಸಾಗಿ ನಿಂತುಕೊಂಡಿದೆ. ಬಸ್ ಹಿಂದೆ ಕುಳಿತಿದ್ದ ನಾಲ್ವರಿಗೆ ತುರ್ತು ನಿರ್ಗಮನದ ಬಾಗಿಲು ತೆರೆಯಲು ಸಾಧ್ಯವಾಗದೆ ಸಜೀವ ದಹನವಾಗಿದ್ದಾರೆ. ಅಲ್ಲದೇ ಆರು ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಂತರ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement