
ನವದೆಹಲಿ: ಮುಂಬೈ ಮೂಲದ ಮಾಡೆಲ್ ಎಂದು ನಟಿಸಿ ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ಸೃಷ್ಟಿಸಿದ ಅಪರಾಧ ವಿಭಾಗದ ಪೊಲೀಸರು ಕುಖ್ಯಾತ ಗೋಗಿ ಗ್ಯಾಂಗ್‌ನ ಸದಸ್ಯನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ನಂಗ್ಲೋಯ್ ನಿವಾಸಿ ಮನೋಜ್ ಕುಮಾರ್ ಎಂದು ಗುರುತಿಸಿದ್ದು, ಈತ 2005ರಲ್ಲಿ ನಂಗ್ಲೋಯ್‌ನಲ್ಲಿ ನಡೆದ ಸುಲಿಗೆ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಪೆರೋಲ್ ಮೇಲೆ ಹೊರಬಂದಿದ್ದಾತ ತಪ್ಪಿಸಿಕೊಂಡಿದ್ದ. ಮನೋಜ್ ಕುಮಾರ್ ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯನಾಗಿದ್ದಾನೆಂದು ತಿಳಿದ ನಂತರ, ನಕಲಿ ಖಾತೆಯನ್ನು ರಚಿಸಿ ಮುಂಬೈ ಮೂಲದ ಮಾಡೆಲ್/ನಟಿಯಂತೆ ನಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಂ ಮೂಲಕ ವಾರಗಟ್ಟಲೆ ಆರೋಪಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಆತ ಸಫ್ದರ್ಜಂಗ್ ಎನ್‌ಕ್ಲೇವ್‌ಗೆ ಬರುವಂತೆ ಮಾಡಿದ್ದಾರೆ. ಕುಮಾರ್ ಅಲ್ಲಿಗೆ ಬಂದಾಗ ಆತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ (ಅಪರಾಧ) ಆದಿತ್ಯ ಗೌತಮ್ ಹೇಳಿದರು.
ಮನೋಜ್ ಕುಮಾರ್ ಮಹೇಂದ್ರಗಢ ಜಿಲ್ಲೆಗೆ ಸೇರಿದವನು. ಶಾಲೆ ಮುಗಿಸಿದ ನಂತರ, ಆತ ತನ್ನ ಸ್ನೇಹಿತ ಚಮನ್‌ಲಾಲ್ ಜೊತೆ ಸೇರಿ ನಂಗ್ಲೋಯ್‌ನಲ್ಲಿ ಬ್ಯುಸಿನೆಸ್ ಪ್ರಾರಂಭಿಸಿದ್ದಾನೆ. ಆತನಿಗೆ ರಾಹುಲ್ ಎಂಬಾತನೊಂದಿಗೆ ಹಳೆಯ ದ್ವೇಷವಿತ್ತು. 2005ರಲ್ಲಿ, ಅವರು ಹಣ ಪಾವತಿಸದಿದ್ದಕ್ಕಾಗಿ ರಾಹುಲ್‌ನನ್ನು ಅಪಹರಿಸಿ ಕೊಂದಿದ್ದರು.
ವಿಚಾರಣಾ ನ್ಯಾಯಾಲಯವು 2013ರಲ್ಲಿ ಮನೋಜ್ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತು. ತಿಹಾರ್‌ನಲ್ಲಿದ್ದಾಗ, ಆತ ಗೋಗಿ ಗ್ಯಾಂಗ್‌ನ ವಿಕಿ ರಂಜಾನ್‌ಪುರ್‌ನ ಸಂಪರ್ಕಕ್ಕೆ ಬಂದನು. ಮತ್ತೊಬ್ಬ ದರೋಡೆಕೋರ ದೀಪಕ್ ದಬಾಸ್ ಕೂಡ ಜೈಲಿನಲ್ಲಿ ಆತನನ್ನು ಭೇಟಿ ಮಾಡಿದ್ದಾನೆ.
2014ರಲ್ಲಿ, ಮನೋಜ್ ಕುಮಾರ್ ಒಂದು ತಿಂಗಳ ಪೆರೋಲ್ ಮೇಲೆ ಜೈಲಿನಿಂದ ಹೊರಬಂದು ಪರಾರಿಯಾಗಿದ್ದ. ನಂತರ ಆತ ದೀಪಕ್ ಮೂಲಕ ಗೋಗಿ ಗ್ಯಾಂಗ್‌ಗೆ ಸೇರಿದ್ದನು. ಆತ ಮತ್ತು ಆತನ ಸಹಚರರು ಶಹಬಾದ್ ಡೈರಿಯಲ್ಲಿ ವ್ಯಕ್ತಿಯನ್ನು ಕೊಂದರು ಮತ್ತು ನರೇಲಾ, ಬೇಗಂಪುರ ಮತ್ತು ಅಲಿಪುರದಲ್ಲಿ ಅನೇಕ ಕಾರು ಕಳ್ಳತನಗಳನ್ನು ಮಾಡಿದರು. ಅವರು ಬವಾನಾ, ನರೇಲಾ ಮತ್ತು ದೆಹಲಿಯ ಇತರ ಹೊರವಲಯಗಳಲ್ಲಿ ಸುಲಿಗೆಗಾಗಿ ದರೋಡೆ ಮಾಡಿದ ಕಾರುಗಳನ್ನು ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
2015ರ ಡಿಸೆಂಬರ್‌ನಲ್ಲಿ ಅವರನ್ನು ಮತ್ತೆ ಬಂಧಿಸಿ ಜೈಲಿಗೆ ಹಾಕಲಾಯಿತು. 2023 ರಲ್ಲಿ, ಅವರು ಪೆರೋಲ್ ಪಡೆದು ಮತ್ತೆ ಪರಾರಿಯಾಗಿದ್ದರು. ಅವರು ಪಾಲಿಯಲ್ಲಿ ಹಲವಾರು ಕಾರು ಕಳ್ಳತನಗಳನ್ನು ಮಾಡಿದರು ಮತ್ತು ಸಿಕ್ಕಿಬಿದ್ದರು. 2024ರ ಡಿಸೆಂಬರ್‌ವರೆಗೆ ಬಿಲಾಡಾ ಜೈಲಿನಲ್ಲಿದ್ದರು. ಆದರೆ, ಅಧಿಕಾರಿಗಳಿಂದ ತಮ್ಮ ಕ್ರೈಂ ಇತಿಹಾಸವನ್ನು ಮರೆಮಾಡುವಲ್ಲಿ ಯಶಸ್ವಿಯಾದರು.
Advertisement