
ನಾಗ್ಪುರ: ಈ ವಾರದ ಆರಂಭದಲ್ಲಿ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 40 ವರ್ಷದ ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ.
ಹಿಂಸಾಚಾರದಿಂದ ಗಂಭೀರವಾಗಿ ಗಾಯಗೊಂಡು ಇಂದಿರಾ ಗಾಂಧಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (IGGMCH)ಚಿಕಿತ್ಸೆ ಪಡೆಯುತ್ತಿದ್ದ ಇರ್ಫಾನ್ ಅನ್ಸಾರಿ ಮಧ್ಯಾಹ್ನ 1.20 ಕ್ಕೆ ನಿಧನರಾದರು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೆಲ್ಡರ್ ಆಗಿದ್ದ ಅನ್ಸಾರಿ ಸೋಮವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಒಂದಾದ ನಾಗ್ಪುರ ರೈಲು ನಿಲ್ದಾಣದಿಂದ ಇಟಾರ್ಸಿಗೆ ರೈಲಿನಲ್ಲಿ ತೆರಳಲು ಮನೆಯಿಂದ ಹೊರಟಿದ್ದರು ಎನ್ನಲಾಗಿದೆ.
ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಘಲ್ ದೊರೆ ಔರಂಗಜೇಬನ ಸಮಾಧಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕುರಾನ್ ಶ್ಲೋಕಗಳಿರುವ 'ಚಾದರ್' ಅನ್ನು ಸುಟ್ಟು ಹಾಕಲಾಗಿದೆ ಎಂಬ ವದಂತಿ ಹರಡಿದ ನಂತರ ಮಾರ್ಚ್ 17 ರಂದು ಹಿಂಸಾಚಾರ ಭುಗಿಲೆದ್ದಿತು. ನಾಗ್ಪುರದ ಹಲವು ಕಡೆಗಳಲ್ಲಿ ದೊಡ್ಡ ಪ್ರಮಾಣದ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.
ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಇರ್ಫಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯಿಂದ ಕರೆ ಮಾಡಿ ಅನ್ಸಾರಿ ಕುಟುಂಬಕ್ಕೆ ಮಾಹಿತಿ ನೀಡಲಾಗಿತ್ತು.
ಅದಕ್ಕೂ ಮುನ್ನಾ ಇರ್ಫಾನ್ ತಲೆಗೆ ತೀವ್ರವಾದ ಗಾಯಗಳಾಗಿದ್ದು, ಕಾಲು ಮುರಿತದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆಮ್ಲಜನಕವನ್ನು ಪಡೆಯುತ್ತಿದ್ದಾರೆ ಎಂದು ಮೃತನ ಸಹೋದರ ಇಮ್ರಾನ್ ಹೇಳಿದ್ದರು. ರೈಲ್ವೆ ನಿಲ್ದಾಣಕ್ಕೆ ಹೋಗುವಾಗ ಅನ್ಸಾರಿಗೆ ಏನಾಯಿತು ಎಂಬುದು ಕುಟುಂಬಕ್ಕೆ ತಿಳಿದಿರಲಿಲ್ಲ
Advertisement