
ನವದೆಹಲಿ: ಗನ್ ತೋರಿಸಿ 60 ಲಕ್ಷ ರೂ. ದೋಚಿದ ಆರೋಪದ ಮೇಲೆ ದೆಹಲಿ ವಿಶ್ವವಿದ್ಯಾಲಯದ ಪದವೀಧರ ಸೇರಿದಂತೆ ಇಬ್ಬರನ್ನು ಹರಿಯಾಣದ ಪಾಣಿಪತ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮಧ್ಯ ದೆಹಲಿಯ ಹೌಜ್ ಖಾಜಿ ಪ್ರದೇಶದಲ್ಲಿ ಗನ್ ತೋರಿಸಿ ಉದ್ಯಮಿಯೊಬ್ಬರ ಉದ್ಯೋಗಿಯಿಂದ 60 ಲಕ್ಷ ರೂ.ಗಳನ್ನು ದೋಚಿ ಪರಾರಿಯಾಗಿದ್ದ ದರೋಡೆಕೋರರನ್ನು ಪೊಲೀಸರು ಸುಮಾರು 400 ಕಿ.ಮೀ. ದೂರದವರೆಗೆ ಬೆನ್ನಟ್ಟಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಮಿತ್ (34) ಮತ್ತು ರವಿ ಗುಪ್ತಾ (40) ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಒಬ್ಬ ದೆಹಲಿ ವಿವಿ ವಿದ್ಯಾರ್ಥಿಯಾಗಿದ್ದು, ಮತ್ತೊಬ್ಬ ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಜಿ ಉದ್ಯೋಗಿ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ, ಉದ್ಯಮಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸೋಮವಾರ ತನ್ನ ಸ್ಕೂಟರ್‌ನಿಂದ ನಗದು ತುಂಬಿದ ಬ್ಯಾಗ್ ಅನ್ನು ಹೊರತೆಗೆಯುತ್ತಿದ್ದಾಗ ದರೋಡೆಕೋರರು ಆತನಿಗೆ ಗನ್ ತೋರಿಸಿ ಬ್ಯಾಗ್ ಕದ್ದಿದ್ದಾರೆ.
"ಏಪ್ರಿಲ್ 28 ರಂದು ವ್ಯವಹಾರ ಸಹೋದ್ಯೋಗಿಯಿಂದ ಸುಮಾರು 60 ಲಕ್ಷ ರೂ.ಗಳನ್ನು ಸಂಗ್ರಹಿಸಿ ತನ್ನ ಮಾಲೀಕನ ನಿವಾಸದ ಹೊರಗೆ ಸ್ಕೂಟರ್‌ನಿಂದ ನಗದು ಚೀಲವನ್ನು ಎತ್ತುತ್ತಿದ್ದಾಗ, ಆರೋಪಿಗಳಲ್ಲಿ ಒಬ್ಬ ಅವರಿಗೆ ಬಂದೂಕು ತೋರಿಸಿ, ಹಣದ ಬ್ಯಾಗ್ ಕದ್ದು ಬೈಕ್ ನಲ್ಲಿ ಪರಾರಿಯಾಗಿದ್ದರು" ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಎಂ ಹರ್ಷವರ್ಧನ್ ಅವರು ತಿಳಿಸಿದ್ದಾರೆ.
Advertisement