
ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಯ ನಂತರ ಜಗತ್ತಿನ ಬಹುತೇಕ ಪಾಶ್ಚಿಮಾತ್ಯ ದೇಶಗಳು ಭಾರತ ಪರವಾಗಿ ನಿಂತಿವೆ. ಇದೀಗ ಖಟ್ಟರ್ ಮುಸ್ಲಿಂ ರಾಷ್ಟ್ರ ಕತಾರ್ ಕೂಡ ಭಾರತದ ಬೆಂಬಲಕ್ಕೆ ನಿಂತಿದ್ದು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವು ಭಾರತದೊಂದಿಗಿದ್ದೇವೆ ಎಂದು ಕತಾರ್ನ ಅಮೀರ್ ಅಲ್ ಥಾನಿ ಹೇಳಿದ್ದಾರೆ.
ಪಹಲ್ಗಾಮ್ ಉಗ್ರ ದಾಳಿಯ ಬಗ್ಗೆ ಕತಾರ್ನ ಅಮೀರ್ ತಮೀಮ್ ಬಿನ್ ಹಮದ್ ಅಲ್-ಥಾನಿ ದುಃಖ ವ್ಯಕ್ತಪಡಿಸಿದ್ದಾರೆ. ಕತಾರ್ನ ಅಮೀರ್ ಪ್ರಧಾನಿ ಮೋದಿಗೆ ಕರೆ ಮಾಡಿ ಮಾತನಾಡಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಪಹಲ್ಗಾಮ್ನಲ್ಲಿ ನಡೆದ ಗಡಿಯಾಚೆಗಿನ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಅವರು ಸಂತಾಪ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಿದರು. ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ಮತ್ತು ಅಪರಾಧಿಗಳನ್ನು ನ್ಯಾಯಕ್ಕೆ ತರಲು ಭಾರತ ತೆಗೆದುಕೊಂಡ ಎಲ್ಲಾ ಕ್ರಮಗಳಿಗೆ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಒಗ್ಗಟ್ಟು ಮತ್ತು ಬೆಂಬಲದ ಸ್ಪಷ್ಟ ಸಂದೇಶಕ್ಕಾಗಿ ಪ್ರಧಾನಿ ಮೋದಿ ಅವರು, ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿಗೆ ಧನ್ಯವಾದ ಅರ್ಪಿಸಿದರು. ಭಾರತ-ಕತಾರ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢವಾಗಿಸಲು ಮತ್ತು ಈ ವರ್ಷದ ಆರಂಭದಲ್ಲಿ ಅಮೀರ್ ಅವರ ರಾಜ್ಯ ಭೇಟಿಯ ಸಮಯದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ಇಬ್ಬರೂ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ನೀಡುವುದಾಗಿ ರಷ್ಯಾ ಭರವಸೆ ನೀಡಿದೆ. ನಿನ್ನೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಭಾರತದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ರಷ್ಯಾದ ಅಧ್ಯಕ್ಷರು ಬಲವಾಗಿ ಖಂಡಿಸಿದರು. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಅಧ್ಯಕ್ಷ ಪುಟಿನ್ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿ ಭಾರತದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ಅಮಾಯಕರ ಸಾವಿಗೆ ಅವರು ತೀವ್ರ ಸಂತಾಪ ಸೂಚಿಸಿದರು ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಈ ಘೋರ ದಾಳಿಯ ಅಪರಾಧಿಗಳು ಮತ್ತು ಅವರ ಬೆಂಬಲಿಗರನ್ನು ನ್ಯಾಯದ ಕಟಕಟೆಗೆ ತರಬೇಕು ಎಂದು ಅವರು ಒತ್ತಿ ಹೇಳಿದರು ಎಂದರು.
ಭಾರತ-ರಷ್ಯಾ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಇಬ್ಬರು ನಾಯಕರು ಪುನರುಚ್ಚರಿಸಿದರು ಎಂದು ಅವರು ಹೇಳಿದರು. 80ನೇ ವಿಜಯ ದಿನದ ವಾರ್ಷಿಕೋತ್ಸವಕ್ಕೆ ಅಧ್ಯಕ್ಷ ಪುಟಿನ್ ಅವರನ್ನು ಅಭಿನಂದಿಸಿದ ಪ್ರಧಾನಿ, ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ವಾರ್ಷಿಕ ಶೃಂಗಸಭೆಗೆ ಪುಟಿನ್ ಅವರನ್ನು ಆಹ್ವಾನಿಸಿದರು.
Advertisement