ಕದನ ವಿರಾಮ ಘೋಷಣೆ ಬಳಿಕ ವಿಕ್ರಮ್ ಮಿಸ್ರಿ ಟ್ರೋಲ್: 'x' ಖಾತೆ ಲಾಕ್; ವಿದೇಶಾಂಗ ಕಾರ್ಯದರ್ಶಿ ಪರ ನಾಯಕರ ಬ್ಯಾಟಿಂಗ್

ಟ್ರೋಲರ್ ಗಳು ಮಿಸ್ರಿ ಹಾಗೂ ಅವರ ಕುಟುಂಬದವರ ಹಳೆಯ ಟ್ವೀಟ್ ಗಳನ್ನು ಹೊರ ತೆಗೆದಿದ್ದು, ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದಾರೆ.
ವಿಕ್ರಮ್ ಮಿಶ್ರಿ
ವಿಕ್ರಮ್ ಮಿಶ್ರಿ
Updated on

ನವದೆಹಲಿ: ಪಾಕಿಸ್ತಾನದೊಂದಿಗಿನ ಕದನ ವಿರಾಮದ ಘೋಷಣೆಯ ನಂತರ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹಾಗೂ ಅವರ ಪುತ್ರಿಯನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಟ್ರೋಲ್ ಮಾಡಲಾಗುತ್ತಿದ್ದು, ಇದನ್ನು ತಪ್ಪಿಸಲು ಮಿಸ್ರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ಲಾಕ್ ಮಾಡಿದ್ದಾರೆ.

ಟ್ರೋಲರ್ ಗಳು ಮಿಸ್ರಿ ಹಾಗೂ ಅವರ ಕುಟುಂಬದವರ ಹಳೆಯ ಟ್ವೀಟ್ ಗಳನ್ನು ಹೊರ ತೆಗೆದಿದ್ದು, ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದಾರೆ.

ಈ ವಿವಾದಕ್ಕೆ ಮಿಸ್ರಿಯವರ ಪುತ್ರಿಯವರನ್ನೂ ಎಳೆದು ತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಿಸ್ರಿ ಅವರ ಪುತ್ರಿಯ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡು ಆಕೆಯ ವಿರುದ್ಧವೂ ನಿಂದನೆಗಳ ಸುರಿಮಳೆಯನ್ನು ಸುರಿಸಿದ್ದಾರೆ.

ಈ ಹಿಂದೆ ರಾಜತಾಂತ್ರಿಕ ವಿಕ್ರಂ ಮಿಸ್ರಿ ಅವರ ಪುತ್ರಿ ರೊಹಿಂಗ್ಯಾರ ಹಕ್ಕುಗಳ ಪರವಾಗಿ ವಕಾಲತ್ತು ವಹಿಸಿದ್ದರು ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿನ ಚರ್ಚೆಗಳಿಂದ ವ್ಯಕ್ತವಾಗಿದ್ದು, ಈ ಹಿನ್ನೆಲೆಯನ್ನೇ ಟ್ರೋಲರ್ ಗಳು ನಿಂದನೆಗಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ನಡುವೆ ಉನ್ನತ ದರ್ಜೆಯ ರಾಜತಾಂತ್ರಿಕರೊಬ್ಬರ ವಿರುದ್ಧ ನಡೆದಿರುವ ಈ ಆನ್ ಲೈನ್ ಟ್ರೋಲ್ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಈ ಹಿಂದೆ ವಿಕ್ರಂ ಮಿಸ್ರಿಯನ್ನು ದೇಶಪ್ರೇಮಿ ಕಾಶ್ಮೀರ ಪಂಡಿತ ಎಂದು ಶ್ಲಾಘಿಸುತ್ತಿದ್ದವರೇ, ದಿಢೀರೆಂದು ಅವರ ವಿರುದ್ಧ ತಿರುಗಿ ಬಿದ್ದಿರುವುದರತ್ತ ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಬೊಟ್ಟು ಮಾಡಿದ್ದಾರೆ.

ವಿಕ್ರಮ್ ಮಿಶ್ರಿ
ಕದನ ವಿರಾಮ ಉಲ್ಲಂಘನೆ: ಇದಕ್ಕೆ ಪಾಕಿಸ್ತಾನವೇ ಸಂಪೂರ್ಣ ಹೊಣೆ- ವಿಕ್ರಮ್ ಮಿಸ್ರಿ

ವಿಕ್ರಂ ಮಿಸ್ರಿಯವರನ್ನು ಗುರಿಯಾಗಿಸಿಕೊಂಡು ನಡೆದಿರುವ ಈ ಕಿರುಕುಳದ ವಿರುದ್ಧ ಹಲವಾರು ಉನ್ನತ ನಾಯಕರು ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರು ಧ್ವನಿ ಎತ್ತಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, “ವಿಕ್ರಂ ಮಿಸ್ರಿ ಅವರು ನಮ್ಮ ದೇಶಕ್ಕಾಗಿ ದಣಿವರಿಯದೆ ಕೆಲಸ ಮಾಡುತ್ತಿರುವ ಸಭ್ಯ ಹಾಗೂ ಪ್ರಾಮಾಣಿಕ ರಾಜತಾಂತ್ರಿಕರಾಗಿದ್ದಾರೆ. ನಮ್ಮ ಸಾರ್ವಜನಿಕ ಸೇವಕರು ಕಾರ್ಯಾಂಗದಡಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಹಾಗೂ ಕಾರ್ಯಾಂಗ ಅಥವಾ ಸರಕಾರವನ್ನು ನಡೆಸುತ್ತಿರುವ ರಾಜಕೀಯ ನಾಯಕತ್ವ ತೆಗೆದುಕೊಳ್ಳುವ ನಿರ್ಧಾರಕ್ಕೆ ಅವರನ್ನು ದೂಷಿಸಬಾರದು ಎಂದು ಸಮರ್ಥಿಸಿಕೊಂಡಿದ್ದಾರೆ.

ಛತ್ತೀಸ್‌ಗಢದ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಚಿನ್ ಪೈಲಟ್, ವಿದೇಶಾಂಗ ಕಾರ್ಯದರ್ಶಿಯ ಕುಟುಂಬವನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲಿಂಗ್ ಮಾಡುವುದನ್ನು ನಾನು ಖಂಡಿಸುತ್ತೇನೆ. ವೃತ್ತಿಪರ ರಾಜತಾಂತ್ರಿಕರು ಮತ್ತು ನಾಗರಿಕ ಸೇವಕರನ್ನು - ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಸಮರ್ಪಿತವಾಗಿ ಕೆಲಸ ಮಾಡುವವರನ್ನು ಗುರಿಯಾಗಿಸಿಕೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್ ಅವರು ಪೋಸ್ಟ್ ಮಾಡಿ, ಮೊದಲು ಮೃತ ನೌಕಾಪಡೆ ಅಧಿಕಾರಿ ವಿನಯ್ ನರ್ವಾಲ್ ರ ಪತ್ನಿ ಹಿಮಾಂಶಿ ನರ್ವಾಲ್ ಮೇಲೆ ಮುಗಿಬಿದ್ದರು. ಇದೀಗ ಕೆಲವು ಟ್ರೋಲರ್ ಗಳು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಹಾಗೂ ಅವರ ಪುತ್ರಿಯ ಮೇಲೆ ಮುಗಿಬಿದ್ದಿದ್ದು, ಆಕೆಯ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡು, ಅವರನ್ನು ನಿಂದಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀಕರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಬೆನ್ನಿಗೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿತ್ತು.

ಸತತ ಮೂರು ದಿನಗಳ ಕಾಲ ನಡೆದ ಸಂಘರ್ಷದ ನಂತರ, ಮೇ 10ರಂದು ಉಭಯ ದೇಶಗಳ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿತ್ತು. ಇದಾದ ನಂತರ, ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ವಿರುದ್ಧ ಸಂಯೋಜಿತ ಟ್ರೋಲ್ ಕಿರುಕುಳ ಪ್ರಾರಂಭವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com