
ಚಂಡೀಗಢ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ಕದನ ವಿರಾಮವನ್ನು ನಿಭಾಯಿಸಿದ ಬಗ್ಗೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಉತ್ತರ ಬಯಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಎಎಪಿ ನಾಯಕ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಯಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಲು ಆಪರೇಷನ್ ಸಿಂಧೂರ್ ಪ್ರಾರಂಭಿಸಿದ ನಂತರ ತರ್ಕಬದ್ಧವಿಲ್ಲದೆ ಕದನ ವಿರಾಮ ಘೋಷಣೆ ಮಾಡಿದ ವಿಧಾನವನ್ನು ಪ್ರಶ್ನಿಸಿದರು.
ಹಠಾತ್ ಕದನ ವಿರಾಮ ಘೋಷಣೆಯಿಂದ ಗಳಿಸಿದ್ದನ್ನು ದುರ್ಬಲಗೊಳಿಸಿದೆ. ಜನರನ್ನು ಗೊಂದಲ ಮತ್ತು ನಿರಾಶೆಗೊಳಿಸಿದೆ. ಪಾಕಿಸ್ತಾನವು ಕದನ ವಿರಾಮಕ್ಕೆ ಮುಂದಾಗಿದ್ದರೆ, ಪಹಲ್ಗಾಮ್ ದಾಳಿಯ ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸುವ ಸಿಕ್ಕ ಹತೋಟಿಯನ್ನು ಬಳಸಿಕೊಳ್ಳಬೇಕಾಗಿತ್ತು ಎಂದರು.
ಇಡೀ ರಾಷ್ಟ್ರ ಮತ್ತು ಪ್ರತಿಪಕ್ಷಗಳು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸುವಲ್ಲಿ ಸರ್ಕಾರದೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದಾಗ, ಸರ್ಕಾರವು ಇದ್ದಕ್ಕಿದ್ದಂತೆ ಕದನ ವಿರಾಮಕ್ಕೆ ಏಕೆ ಒಪ್ಪಿಕೊಂಡಿತು? ಪಾಕಿಸ್ತಾನ ಕದನ ವಿರಾಮದ ಬಗ್ಗೆ ತುಂಬಾ ಉತ್ಸುಕವಾಗಿದ್ದರೆ, ಪಹಲ್ಗಾಮ್ ದಾಳಿಯ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೇಂದ್ರವು ಪಾಕಿಸ್ತಾನವನ್ನು ಏಕೆ ಒತ್ತಾಯಿಸಲಿಲ್ಲ? ಎಂದು ಪ್ರಶ್ನಿಸಿದರು.
ಪಹಲ್ಗಾಮ್ ದಾಳಿಯಲ್ಲಿ ಉಗ್ರರು ಮಹಿಳೆಯರ ಸಿಂಧೂರ ಅಳಿಸಿದ್ದಾರೆ. ಪಾಕಿಸ್ತಾನ ಮನವಿ ಮಾಡಿತು ಅಂತಾ ಕದನ ವಿರಾಮಕ್ಕೆ ಒಪ್ಪಿಕೊಂಡದ್ದು ಎಷ್ಟು ಸರಿ? ಮೋದಿ ಅವರು ಪಾಕಿಸ್ತಾನದ ಪ್ರಧಾನಿಯನ್ನು ಕರೆದು 1972 ರ ಒಪ್ಪಂದದಂತೆ ಲಿಖಿತ ಒಪ್ಪಂದಕ್ಕೆ ಏಕೆ ಸಹಿ ಹಾಕಲಿಲ್ಲ? ಎಂದು ಪ್ರಶ್ನೆ ಎತ್ತಿದರು.
ಭಾರತೀಯ ಅಧಿಕಾರಿಗಳು ಕದನ ವಿರಾಮವನ್ನು ಘೋಷಿಸುವ ಅರ್ಧ ಗಂಟೆ ಮೊದಲು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಗೆ ಕದನ ವಿರಾಮವನ್ನು ಘೋಷಿಸಿದರು? ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕುವ ಮೂಲಕ ಎರಡೂ ದೇಶಗಳನ್ನು ಕದನ ವಿರಾಮಕ್ಕೆ ಒಪ್ಪಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ. ಪ್ರಧಾನಿ ತಮ್ಮ ಭಾಷಣದಲ್ಲಿ ಟ್ರಂಪ್ ಹೇಳಿಕೆಯನ್ನು ಏಕೆ ಪ್ರಸ್ತಾಪಿಸಲಿಲ್ಲ?"ಪ್ರಧಾನಿಯವರ ಮೌನವು ಏನೋ ತಪ್ಪಾಗಿದೆ ಎಂಬುದನ್ನು ಸೂಚಿಸುತ್ತದೆ ಮತ್ತು ಅಂತಹ ವಿಷಯದಲ್ಲಿ ಈ ಮೌನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
Advertisement