
ನವದೆಹಲಿ: ಭಾರತ ಒಂದೊಂದೇ ಏಟಿಗೆ ಬೆದರಿ ತೆಪ್ಪಗಾದ ಪಾಕಿಸ್ತಾನ ಇದೀಗ ಸಿಂಧೂ ನದಿ ಜಲ ಒಪ್ಪಂದ ಸ್ಥಗಿತಗೊಳಿಸುವ ನಿರ್ಧಾರವನ್ನು ಪರಿಶೀಲಿಸುವಂತೆ ದುಂಬಾಲು ಬಿದ್ದಿದೆ.
ಈ ಸಂಬಂಧ ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ, ಭಾರತದ ಜಲ ಶಕ್ತಿ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಭಾರತ ತನ್ನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿದೆ. ಈ ವಿಷಯವನ್ನು ಚರ್ಚಿಸಲು ಪಾಕಿಸ್ತಾನ ಸಿದ್ಧವಾಗಿದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರಾಯೋಜಿತ ಉಗ್ರರು ದಾಳಿ ನಡೆಸಿದ ಬಳಿಕ ಏಪ್ರಿಲ್ 23 ರಂದು ಭದ್ರತಾ ಸಭೆಯ ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ 1960ರಲ್ಲಿ ನಡೆದಿದ್ದ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.
ಏನಿದು ಸಿಂಧೂ ಜಲ ಒಪ್ಪಂದ: ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಒಪ್ಪಂದದ ಪ್ರಕಾರ, ಪೂರ್ವದ ನದಿಗಳ ನೀರನ್ನು ಭಾರತವು ಬಳಸಿಕೊಳ್ಳಬಹುದು. ಪಶ್ಚಿಮದ ನದಿಗಳ ನೀರನ್ನು ಪಾಕಿಸ್ತಾನವು ಹೆಚ್ಚಾಗಿ ಬಳಸುತ್ತದೆ.
ಭಾರತವು ಪಶ್ಚಿಮ ನದಿಗಳ ಮೇಲೆ ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸಬಹುದು. ಆದರೆ, ಕೆಲವು ನಿಯಮಗಳನ್ನು ಪಾಲಿಸಬೇಕು. ಪಾಕಿಸ್ತಾನವು ಭಾರತದ ಯೋಜನೆಗಳ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು.
ಸಿಂಧೂ ನದಿ ಒಪ್ಪಂದದನ್ವಯ ಭಾರತಕ್ಕೆ ಪೂರ್ವ ನದಿಗಳಾದ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳ ನೀರನ್ನು ಬಳಸುವ ಹಕ್ಕಿದೆ. ಅದೇ ರೀತಿ ಪಾಕಿಸ್ತಾನಕ್ಕೆ ಪಶ್ಚಿಮ ನದಿಗಳಾದ ಸಿಂಧೂ, ಝೀಲಂ ಮತ್ತು ಚೆನಾಬ್ ನದಿಗಳ ನೀರನ್ನು ಬಳಸುವ ಹಕ್ಕಿದೆ.
ಆದರೆ ಈಗ ಭಾರತ ತನಗೆ ಇಷ್ಟ ಬಂದ ಸಮಯದಲ್ಲಿ ನೀರನ್ನು ಜಲಾಶಯದಿಂದ ಹರಿಸುತ್ತಿದೆ. ರಕ್ತ ಮತ್ತು ನೀರು ಜೊತೆಯಾಗಿ ಹರಿಯಲು ಸಾಧ್ಯವಿಲ್ಲ. ಭಯೋತ್ಪಾದಕತೆ ಮತ್ತು ಮಾತುಕತೆ ಎರಡು ಜೊತೆಯಾಗಿ ಸಾಗುವುದಿಲ್ಲ. ಉಗ್ರರ ವಿರುದ್ಧ ಪಾಕ್ ಕಠಿಣ ಕ್ರಮ ಕೈಗೊಳ್ಳುವವರೆಗೂ ಈ ಒಪ್ಪಂದ ಅಮಾನತಿನಲ್ಲಿ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೇಳಿಕೆ ನೀಡಿದ್ದರು.
ಹೀಗಾಗಿ ಮುಂದಾಗುವ ಅನಾಹುತಗಳನ್ನು ಅಂದಾಜಿಸಿರುವ ಪಾಕಿಸ್ತಾನ ಸಿಂಧೂ ನದಿ ಜಲ ಒಪ್ಪಂದವನ್ನು ಪುನರ್ ಪರಿಶೀಲಿಸುವಂತೆ ಭಾರತಕ್ಕೆ ಮನವಿ ಮಾಡಿದೆ ಎನ್ನಲಾಗಿದೆ.
Advertisement