
ನವದೆಹಲಿ: ಭಾರತ-ಪಾಕ್ ಸಂಘರ್ಷದ ವೇಳೆ ಪಾಕಿಸ್ತಾನದ ಪರವಾಗಿ ನಿಂತು, ಸೇನಾ ನೆರವು ನೀಡಿದ್ದ ಮಿತ್ರ ದ್ರೋಹಿ ಟರ್ಕಿ ರಾಷ್ಟ್ರದ ವಿರುದ್ಧ ಭಾರತದಲ್ಲಿ 'ಬಾಯ್ಕಾಟ್ ಟರ್ಕಿ' (ಬಹಿಷ್ಕಾರ ಅಭಿಯಾನ) ಶುರುವಾಗಿದೆ.
ಸಂಘರ್ಷದ ವೇಳೆ ಪಾಕಿಸ್ತಾನದ ಜೊತೆಗೆ ಕೈಜೋಡಿಸಿ ಭಾರತದ ಮೇಲೆ ದಾಳಿ ಮಾಡಿದ್ದ ಟರ್ಕಿ ವಿರುದ್ದ ಭಾರತ ಕೂಡ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಭಾರತ ವಿರೋಧಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ಟರ್ಕಿಯ ಟಿಆರ್‌ಟಿ ವರ್ಡ್ ಎಂಬ ಸುದ್ದಿ ಮಾಧ್ಯಮ ವೊಂದರ ಎಕ್ಸ್ ಖಾತೆಯನ್ನು ಭಾರತ ಸರ್ಕಾರ ನಿಷೇಧಿಸಿದೆ. ಮತ್ತೊಂದೆಡೆ ಟರ್ಕಿ, ಅಜರ್ ಬೈಜಾನ್ ಪ್ರವಾಸ ಕೈಬಿಡಿ ಎಂದು ಜಾಲತಾಣ ದಲ್ಲಿ ಅಭಿಯಾನ ಆರಂಭವಾಗಿದೆ.
ಸಂಕಷ್ಟದಲ್ಲಿ ಸಿಲುಕಿದ್ದಾಗ ಭಾರತದ ನೆರವು ಮರೆತ ಟರ್ಕಿ ಮತ್ತು ಅಜರ್‌ಬೈಜಾನ್ ಜೊತೆಗಿನ ಎಲ್ಲಾ ಸಂಬಂಧ ಕಡಿತ ಮಾಡಬೇಕೆಂದು ದೊಡ್ಡಮಟ್ಟದಲ್ಲಿ ಕೂಗು ಕೇಳಿ ಬರುತ್ತಿದೆ.
ಈ ಹಿಂದೆ ಮಾಲ್ಡೀವ್ಸ್'ಗೆ ನೀಡಿದ್ದ ಆರ್ಥಿಕ ಹೊಡೆತವನ್ನು ಇದೀಗ ಪಾಕಿಸ್ತಾನದ ಮಿತ್ರ ದೇಶಗಳಿಗೂ ವಿಸ್ತರಿಸಿ ಪಾಠ ಕಲಿಸಬೇಕೆಂಬ ಆಗ್ರಹ ಜನ ಸಾಮಾನ್ಯರಿಂದ ಕೇಳಿಬರುತ್ತಿದೆ.
ಬಾಯ್ಕಾಟ್ ಟರ್ಕಿ' ತೀವ್ರಗೊಳ್ಳುತ್ತಿದ್ದು, ಭಾರತೀಯರು ಇದೀಗ ಟರ್ಕಿ ಪ್ರವಾಸಗಳನ್ನು ರದ್ದು ಮಾಡುತ್ತಿದ್ದಾರೆ. ಅಲ್ಲದೆ, ಟರ್ಕಿ ಉತ್ಪನ್ನಗಳಾದ ಒಣಹಣ್ಣು ಆಮದು ಸ್ಥಗಿತಕ್ಕೆ ಮುಂದಾಗುತ್ತಿದ್ದಾರೆ. ಟರ್ಕಿಯಲ್ಲಿ ಚಲನಚಿತ್ರ ಚಿತ್ರೀಕರಣಕ್ಕೂ ಭಾರತೀಯರ ಹಿಂದೇಟು ಹಾಕುತ್ತಿದ್ದಾರೆ.
ಇದರೊಂದಿಗೆ ವೈರಿರಾಷ್ಟ್ರ ಪಾಕಿಸ್ತಾನದ ಬೆನ್ನಿಗೆ ನಿಂತ ಕಾರಣ ಭಾರತ ವ್ಯಾಪಾರ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ನೀಡಿರುವ ಪೆಟ್ಟಿನಿಂದ ಟರ್ಕಿ ಕಂಗಾಲಾಗಿದ್ದು, ಭಾರತೀಯರ ಮನವೊಲಿಸಲು ಹರಸಾಹಸ ಪಡುತ್ತಿದೆ.
ಈ ಸಂಬಂಧ ಟರ್ಕಿಯ ಪ್ರವಾಸೋದ್ಯಮ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, ಬಹುತೇಕ ಜನರಿಗೆ ಟರ್ಕಿಯ ಭಾರತ-ಪಾಕ್ ನಡುವಿನ ಸಂಘರ್ಷದ ಬಗ್ಗೆ ಗೊತ್ತೇ ಇಲ್ಲ. ಅದಕ್ಕೂ, ಪ್ರವಾಸೋದ್ಯಮಕ್ಕೂ ಸಂಬಂಧವಿಲ್ಲ. ಭಾರತೀಯ ಪ್ರವಾಸಿಗರನ್ನು ನಾವು ಸೌಜನ್ಯದಿಂದ ನೋಡಿಕೊಳ್ಳುತ್ತೇವೆ ಹಾಗೂ ಆರಾಮ, ಸುರಕತೆ ಮತ್ತು ತೃಪ್ತಿಯ ಭರವಸೆ ನೀಡುತ್ತೇವೆ. ಆದ ರಣ, ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟರ್ಕಿ ಪ್ರವಾಸವನ್ನು ರದ್ದು ಮಾಡುವ ಅಥವಾ ಮುಂದೂಡುವ ಅಗತ್ಯವಿಲ್ಲ ಎಂದು ಹೇಳಿದೆ.
Advertisement