
ಚೆನ್ನೈ: ತಮಿಳುನಾಡಿನಲ್ಲಿ ರಾಸಾಯನಿಕ ಘಟಕದಲ್ಲಿನ ರಾಸಾಯನಿಕ ನೀರಿನ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 20 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ಕಡಲೂರಿನ ಸಿಪ್ಕಾಟ್ ನಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಕಾರ್ಖಾನೆಯಲ್ಲಿ ರಾಸಾಯನಿಕ ನೀರಿನ ಟ್ಯಾಂಕರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಘಟನೆಯಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಕಡಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಸಾಯನಿಕ ನೀರಿನ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಹತ್ತಿರದ ಮನೆಗಳಿಗೆ ರಾಸಾಯನಿಕ ನೀರು ನುಗ್ಗಿದೆ. ಬಳಿಕ ಇಲ್ಲಿನ ನಿವಾಸಿಗಳು ವಾಂತಿ ಮಾಡಿಕೊಂಡಿದ್ದು, ಮೂರ್ಛೆ ಹೋದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಡಲೂರು ಸಿಪ್ಕಾಟ್ ಕೈಗಾರಿಕಾ ಎಸ್ಟೇಟ್‌ನ ಕುಡಿಕಾಡು ಗ್ರಾಮದ ಬಳಿ ಖಾಸಗಿ ಬಣ್ಣ ಬಳಿಯುವ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ. ರಾಸಾಯನಿಕ ಕಂಪನಿಯಲ್ಲಿ ರಾಸಾಯನಿಕಗಳನ್ನು ಇಳಿಸುವ ಕೆಲಸ ನಡೆಯುತ್ತಿತ್ತು.
ಈ ವೇಳೆ, ಸಿಪ್ಕಾಟ್ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಅತಿಯಾದ ಶಾಖದಿಂದಾಗಿ 6 ಲಕ್ಷ ಲೀಟರ್ ರಾಸಾಯನಿಕ ನೀರನ್ನು ಹೊಂದಿದ್ದ ಟ್ಯಾಂಕರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತು. ಇದರಿಂದಾಗಿ, ಹತ್ತಿರದ ಮನೆಗಳಿಗೆ ರಾಸಾಯನಿಕ ನೀರು ನುಗ್ಗಿತು. ರಾಸಾಯನಿಕ ತ್ಯಾಜ್ಯ ನೀರು ಪ್ರವೇಶಿಸಿದ ಕಾರಣ ಕೆಲವು ಮನೆಗಳ ಗೋಡೆಗಳು ಕುಸಿದಿವೆ.
ಮನೆಗಳಿಗೆ ರಾಸಾಯನಿಕ ನೀರು ಪ್ರವೇಶಿಸಿದ್ದರಿಂದ ಕಣ್ಣಿನ ಕಿರಿಕಿರಿ, ವಾಂತಿ ಮತ್ತು ಮೂರ್ಛೆ ಹೋದ ಕಾರಣ 20 ಕ್ಕೂ ಹೆಚ್ಚು ಜನರನ್ನು ಕಡಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯರ ಪ್ರತಿಭಟನೆ
ಇನ್ನು ಈ ಪ್ರದೇಶದಲ್ಲಿ ಇಷ್ಟು ದೊಡ್ಡ ಘಟನೆ ಸಂಭವಿಸಿದ್ದರೂ ದುರಂತದ ಬಳಿಕ ಅಧಿಕಾರಿಗಳು ಬಂದಿಲ್ಲ ಎಂದು ಆ ಪ್ರದೇಶದ 50 ಕ್ಕೂ ಹೆಚ್ಚು ಜನರು ಕಡಲೂರು-ಚಿದಂಬರಂ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ವಿಷಯ ತಿಳಿದ ಕೂಡಲೇ ಕಡಲೂರು ತಾಲೂಕು ಮ್ಯಾಜಿಸ್ಟ್ರೇಟ್ ಮಹೇಶ್ ಮತ್ತು ಪೊಲೀಸ್ ಇಲಾಖೆ ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಕಡಲೂರು ಮುಧುನಗರ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.
Advertisement