
ನವದೆಹಲಿ: ‘ಆಪರೇಷನ್ ಸಿಂಧೂರ’ ಮತ್ತು ನಂತರದ ಬೆಳವಣಿಗೆಗಳಿಗೆ ಸಂಬಂಧಪಟ್ಟಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹೊಗಳಿದ ಸಂಸದ ಶಶಿ ತರೂರ್ ನಿಲುವಿಗೆ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕೈಪಡೆ ಇದೀಗ ಮನೆ ಒಡೆದ ಹಾಲಿನಂತಾಗಿದೆ.
ಭಾರತ-ಪಾಕಿಸ್ತಾನ ಸಂಘರ್ಷದ ಕುರಿತ ಪಕ್ಷದ ಅಧಿಕೃತ ಹೇಳಿಕೆಗಿಂತ ಭಿನ್ನವಾಗಿ ಪದೇ ಪದೇ ಶಶಿ ತರೂರ್ ಹೇಳಿಕೆ ನೀಡುತ್ತಿರುವುದು. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರನ್ನು ಹೊಗಳುತ್ತಿರುವುದು ಪಕ್ಷದಲ್ಲಿ ಅಸಮಾಧಾನವನ್ನುಂಟು ಮಾಡಿದೆ.
ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆ, ಆ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ಕುರಿತು ಚರ್ಚಿಸಲು ಗುರುವಾರ ಕಾಂಗ್ರೆಸ್‌ನ ಹಿರಿಯ ನಾಯಕರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ, ‘ಶಶಿ ತರೂರ್ ಲಕ್ಷಣ ರೇಖೆ ದಾಟಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆಂದು ತಿಳಿದುಬಂದಿದೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜೈರಾಮ್ ರಮೇಶ್, “ಶಶಿ ತರೂರ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷದ ಅಧಿಕೃತ ನಿಲುವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ, ಆ ಬಳಿಕದ ಭಾರತ-ಪಾಕಿಸ್ತಾನ ಸಂಘರ್ಷ, ಕದನ ವಿರಾಮ ಘೋಷಣೆ, ಅದಕ್ಕೆ ನಾವು ಮಧ್ಯಸ್ಥಿಕೆ ವಹಿಸಿದ್ದೇವೆ ಎಂಬ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ, ಇವೆಲ್ಲವೂ ಮೋದಿ ಸರ್ಕಾರದ ವೈಫಲ್ಯ ಎಂಬುವುದು ಕಾಂಗ್ರೆಸ್ ಪಕ್ಷದ ಅಭಿಪ್ರಾಯವಾಗಿದೆ.
ಈ ಸಂಬಂಧ ಪ್ರತಿದಿನ ಹಲವು ಪ್ರಶ್ನೆಗಳನ್ನು ಕಾಂಗ್ರೆಸ್ ಸರ್ಕಾರಕ್ಕೆ ಕೇಳುತ್ತಿದೆ. ಈ ನಡುವೆ ಸಂಸದ ಶಶಿ ತರೂರ್ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಪರ ಬ್ಯಾಟ್ ಬೀಸುತ್ತಿರುವುದು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಮೋದಿ ಸರ್ಕಾರದ ವಿದೇಶಾಂಗ ನೀತಿ ಸಂಪೂರ್ಣ ವಿಫಲವಾಗಿದ್ದು, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಅದನ್ನು ಎತ್ತಿ ತೋರಿಸುವುದು ಪ್ರತಿಯೊಬ್ಬ ಭಾರತೀಯ ನಾಯಕನ ಕರ್ತವ್ಯ” ಎಂದು ಕಾಂಗ್ರೆಸ್ ನಾಯಕ ಪ್ರವೀಣ್ ಚಕ್ರವರ್ತಿ ಹೇಳಿದ್ದಾರೆ.
ತಿರುವನಂತಪುರಂ, ತಿರುಚಿರಾಪಳ್ಳಿ ಅಥವಾ ಥಾಣೆ ಯಾವುದೇ ಕ್ಷೇತ್ರದ ಸಂಸದರಾಗಿರಲಿ, ಇಂಗ್ಲೀಷ್, ತಮಿಳು ಅಥವಾ ಮರಾಠಿ ಯಾವುದೇ ಭಾಷೆಯಲ್ಲಿ ಏನೇ ಹೇಳಲಿ, ಸತ್ಯಗಳು ಮಾತ್ರ ನಿರ್ವಿವಾದ. ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತ ಮತ್ತು ಪಾಕಿಸ್ತಾನ ಸಮಾನರು ಎಂದು ಹೇಳಿದ್ದಾರೆ. ಕಾಶ್ಮೀರ ಅಂತಾರಾಷ್ಟ್ರೀಯ ವಿಷಯವಾಗಿದೆ, ಅಮೆರಿಕವು ಭಾರತವನ್ನು ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಒತ್ತಾಯಿಸಿತು ಎಂದು ಹೇಳಿದ್ದಾರೆ ಎಂದು ಚಕ್ರವರ್ತಿ ತಿಳಿಸಿದ್ದಾರೆ.
ತನ್ನ ನಿಲುವಿಗೆ ಪಕ್ಷದ ನಾಯಕರು ಅಸಮಾಧಾನಗೊಂಡ ಬಗ್ಗೆ ಪ್ರತಿಕ್ರಿಯಿಸಿರುವ ತರೂರ್, “ನನ್ನ ಅಭಿಪ್ರಾಯಗಳು ವೈಯಕ್ತಿವಾಗಿದ್ದು, ಪಕ್ಷದ ಅಧಿಕೃತ ನಿಲುವಲ್ಲ” ಎಂದಿದ್ದಾರೆ.
ನಾನೊಬ್ಬ ಹೆಮ್ಮೆಯ ಭಾರತೀಯ ನಾಗರಿಕನಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಅದು ನನ್ನ ವೈಯಕ್ತಿಕ ಅಭಿಪ್ರಾಯ. ನಾನು ಪಕ್ಷದ ವಕ್ತಾರನಲ್ಲ, ನನ್ನ ಹೇಳಿಕೆ ಪಕ್ಷದ ಅಧಿಕೃತ ಹೇಳಿಕೆಯಲ್ಲ. ನಾನು ಹೇಳಿದ್ದನ್ನು ನೀವು ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ಆ ಕಾರಣಕ್ಕೆ ನನ್ನ ಹೊಗಳಬಹುದು, ತೆಗಳಬಹುದು, ಅದು ನಿಮ್ಮಿಷ್ಟ ಎಂದು ತರೂರ್ ತಿಳಿಸಿದ್ದಾರೆ.
ಇದೇ ವೇಳೆ ಪಕ್ಷದ ಕಾರ್ಯಕಾರಿ ಸಭೆಯಲ್ಲಿ “ಲಕ್ಷಣ ರೇಖೆ ದಾಟಿದ್ದಾರೆ” ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂಬುವುದನ್ನು ಶಶಿತರೂರ್ ತಳ್ಳಿ ಹಾಕಿದ್ದಾರೆ.
Advertisement