
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತಿನಲ್ಲಿ ನರೇಗಾದಲ್ಲಿ ಭಾರೀ ಹಗರಣವೊಂದು ಬೆಳಕಿಗೆ ಬಂದಿದೆ. 71 ಕೋಟಿ ರೂ. ಗಳ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪಂಚಾಯತ್ ಮತ್ತು ಕೃಷಿ ಸಚಿವ ಬಚು ಖಬಾದ್ ಅವರ ಪುತ್ರ ಬಲ್ವಂತ್ ಖಬಾದ್ ಅವರನ್ನು ಬಂಧಿಸಲಾಗಿದೆ. ಇದು ಗುಜರಾತ್‌ನ ಗ್ರಾಮೀಣ ಅಭಿವೃದ್ಧಿ ವ್ಯವಸ್ಥೆಯನ್ನು ಅಲುಗಾಡಿಸಿದೆ.
ಗುಜರಾತಿನ ದೇವಗಢ್ ಬರಿಯಾ ಮತ್ತು ಧನ್ ಪುರ ತಾಲ್ಲೂಕುಗಳಲ್ಲಿ ಈ ಹಗರಣ ಬೆಳಕಿಗೆ ಬಂದಿದೆ. ಬಂಧನವನ್ನು ದಾಹೋದ್ ಡಿವೈಎಸ್ಪಿ ಜಗದೀಶ್ ಭಂಡಾರಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಧನ್ ಪುರ ಮತ್ತು ದೇವಗಢ್ ಬರಿಯಾದಲ್ಲಿ ಮನ್ರೇಗಾ ಹಗರಣಕ್ಕೆ ಸಂಬಂಧಿಸಿದಂತೆ ಬಲ್ವಂತ್ ಖಬಾದ್ ಮತ್ತು ತಾಲೂಕು ಅಭಿವೃದ್ಧಿ ಅಧಿಕಾರಿ (ಟಿಡಿಒ) ದರ್ಶನ್ ಪಟೇಲ್ ಅವರನ್ನು ಬಂಧಿಸಲಾಗಿದೆ.
ಸಚಿವರ ಕಿರಿಯ ಪುತ್ರ ಕಿರಣ್ ಖಬಾದ್ ನಾಪತ್ತೆಯಾಗಿದ್ದು, ಬಹು ಕೋಟಿ ವಂಚನೆ ಕುರಿತು ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆಗಳು, ಬಂಡ್‌ಗಳು ಮತ್ತಿತರ ಮೂಲ ಸೌಕರ್ಯ ನಿರ್ಮಾಣಗಳ ಕಾಮಗಾರಿಗಳ ಹೆಸರಿನಲ್ಲಿ ಹಗರಣ ನಡೆದಿದೆ. ಅದು ಕೇವಲ ಕಾಗದದಲ್ಲಿ ಮಾತ್ರ ಇದೆ. MGNREGA ಅಡಿಯಲ್ಲಿ ನಕಲಿ ಬಿಲ್ ತಯಾರಿಸಿ ಹಣ ಲಪಟಾಯಿಸಲಾಗಿದೆ. ಹಣವನ್ನು ಸಚಿವರ ಪುತ್ರರಿಗೆ ಸಂಬಂಧಿಸಿದ ಏಜೆನ್ಸಿಗಳಿಗೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.
ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಎ) ನಿರ್ದೇಶಕರಾದ ಬಿ ಎಂ ಪಟೇಲ್ ಅವರು ದೇವಗಢ್ ಬರಿಯಾ ಮತ್ತು ಧನ್‌ಪುರ ತಾಲೂಕುಗಳಲ್ಲಿ ಯೋಜನೆ ಅನುಷ್ಠಾನದಲ್ಲಿ ಪ್ರಮುಖ ಅಕ್ರಮಗಳನ್ನು ಪತ್ತೆ ಹಚ್ಚಿದ ನಂತರ ಈ ಹಗರಣ ಬೆಳಕಿಗೆ ಬಂದಿದೆ. ನಂತರ ಲೆಕ್ಕಪರಿಶೋಧನೆ ವೇಲೆ ವಂಚನೆ ಬಹಿರಂಗವಾಗಿದೆ. ಸಾಕ್ಷ್ಯಗಳು ಹೆಚ್ಚಾಗುತ್ತಿರುವಂತೆಯೇ ಮತ್ತೊಂದೆಡೆ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿದ್ದಾರೆ.
2021 ಮತ್ತು 2025 ರ ನಡುವೆ, ಕುವಾ, ರೆಧನಾ ಮತ್ತು ಸಿಮಾಮೊಯ್‌ನಂತಹ ಹಳ್ಳಿಗಳನ್ನು MGNREGA ಯೋಜನೆಗಳ ಫಲಾನುಭವಿಗಳೆಂದು ಗುರುತಿಸಲಾಗಿದೆ. ಆದರೆ ಯಾವುದೇ ಕೆಲಸಗಳು ಆಗಿಲ್ಲ. ಅಂದಾಜು 160 ಕೋಟಿ ರೂ.ಗಳ ವಂಚನೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಇದುವರೆಗೆ ದೇವಗಢ್ ಬರಿಯಾದಲ್ಲಿ 60.90 ಕೋಟಿ ರೂಪಾಯಿ ಹಾಗೂ ಧನ್‌ಪುರದಲ್ಲಿ 10.10 ಕೋಟಿ ರೂಪಾಯಿ ನಕಲಿ ಬಿಲ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
Advertisement