ಪಾಕ್ 'ಉಗ್ರ ಮುಖ' ಬಯಲಿಗೆ ಭಾರತ ಪಣ: ಭಯೋತ್ಪಾದಕ ರಾಷ್ಟ್ರದ ಮೇಲೆ ಒತ್ತಡ ಹೆಚ್ಚಿಸಲು 51 ಸಂಸದರು ವಿದೇಶಕ್ಕೆ; ತರೂರ್ ಅಮೆರಿಕಕ್ಕೆ, ಕನಿಮೋಳಿ ರಷ್ಯಾಕ್ಕೆ, ಉಳಿದ ತಂಡ ಎಲ್ಲೆಲ್ಲಿಗೆ?

ಮೇ 22ರಿಂದ ಪ್ರವಾಸ ಆರಂಭಿಸಲಿರುವ ಈ 1 ಸರ್ವಪಕ್ಷ ನಿಯೋಗಗಳು ವಿವಿಧ ದೇಶಗಳಿಗೆ ಹೋಗಿ, ಭಾರತದ ರಾಷ್ಟ್ರೀಯ ಒಮ್ಮತ ಮತ್ತು ಎಲ್ಲಾ ವಿಧದ ಭಯೋತ್ಪಾದನೆಯನ್ನು ಎದುರಿಸಲು ದೃಢನಿಶ್ಚಯವನ್ನು ಪ್ರದರ್ಶಿಸುತ್ತವೆ.
ಸರ್ವಪಕ್ಷ ನಿಯೋಗ
ಸರ್ವಪಕ್ಷ ನಿಯೋಗ
Updated on

ನವದೆಹಲಿ: ಪಹಲ್ಗಾಮ್ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ತಾನದ ಉಗ್ರ ನೆಲೆ, ಸೇನಾ ನೆಲೆಗಳ ಮೇಲೆ ಆಪರೇಷನ್ ಸಿಂಧೂರ ದಾಳಿ ನಡೆಸಿದ್ದ ಭಾರತ, ಇದೀಗ ಪಾಕಿಸ್ತಾನದ ವಿರುದ್ದ ರಾಜತಾಂತ್ರಿಕ ದಾಳಿಗೆ ಸಪ್ತಾಸ್ತ್ರ ಬಳಸಲು ನಿರ್ಧರಿಸಿದೆ. ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ 7 ನಾಯಕರ ನೇತೃತ್ವದಲ್ಲಿ ಸಂಸದರ ನಿಯೋಗವೊಂದನ್ನು ಹಲವು ದೇಶಗಳಿಗೆ ರವಾನಿಸುವ ಮೂಲಕ ಪಾಕಿಸ್ತಾನದ ಉಗ್ರವಾದದ ಮುಖವಾಡ ಬಯಲು ಮಾಡುವ ದಾಳ ಉರುಳಿಸಿದೆ.

ಅಚ್ಚರಿಯ ವಿಷಯವೆಂದರೆ ಈ ಹಿಂದೆ ಕರ್ನಾಟಕ ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಂಸದ ನಾಸಿರ್ ಹುಸೇನ್ ಹೆಸರನ್ನು ಕಾಂಗ್ರೆಸ್ ಕಳುಹಿಸಿದ್ದರೂ, ಸರ್ಕಾರ ಅವರನ್ನು ಪರಿಗಣಿಸಿಲ್ಲ. ಆದರೆ, ಕಾಂಗ್ರೆಸ್ ಹೆಸರು ಕಳುಹಿಸದೇ ಇದ್ದರೂ ಶಶಿ ತರೂರ್ ಅವರಿಗೆ ತಂಡದ ನೇತೃತ್ವ ನೀಡುವ ಮೂಲಕ ಅವರ ವಿದೇಶಾಂಗ ವಿಷಯಗಳ ನಿರ್ವಹಣೆಯ ಜ್ಞಾನಕ್ಕೆ ಮನ್ನಣೆ ನೀಡಿದೆ.

ಶುಕ್ರವಾರ ಕೇಂದ್ರ ಸರ್ಕಾರವು ನಿಯೋಗವನ್ನು ಕಳಿಸುವ ವಿಷಯ ಪ್ರಸ್ತಾಪ ಮಾಡಿತ್ತು. ಇದೀಗ ಈ ನಿಯೋಗಗಳ ನೇತೃತ್ ಯಾರು ವಹಿಸಲಿದ್ದಾರೆಂಬ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಅದರನ್ವಯ ಬಿಜೆಪಿಯ ರವಿಶಂಕರ್ ಪ್ರಸಾದ್, ಬಿಜೆಡಿಯ ಬೈಜಯಂತ್ ಪಾಂಡಾ, ಜೆಡಿಯುನ ಸಂಜಯ್ ಕುಮಾರ್, ಕಾಂಗ್ರೆಸ್‌ನ ಶಶಿ ತರೂ‌ರ್, ಡಿಎಂಕೆಯ ಕನಿಮೋಳಿ, ಎನ್‌ಸಿಪಿ (ಶರದ್ ಬಣ) ಸುಪ್ರಿಯಾ ಸುಳೆ, ಶಿವಸೇನೆಯ ಶ್ರೀಕಾಂತ್ ಶಿಂಧೆ ಅವರು ನಿಯೋಗಗಳ ನಾಯಕತ್ವ ವಹಿಸಲಿದ್ದಾರೆ.

ಮೇ 22ರಿಂದ ಪ್ರವಾಸ ಆರಂಭಿಸಲಿರುವ ಈ 1 ಸರ್ವಪಕ್ಷ ನಿಯೋಗಗಳು ವಿವಿಧ ದೇಶಗಳಿಗೆ ಹೋಗಿ, ಭಾರತದ ರಾಷ್ಟ್ರೀಯ ಒಮ್ಮತ ಮತ್ತು ಎಲ್ಲಾ ವಿಧದ ಭಯೋತ್ಪಾದನೆಯನ್ನು ಎದುರಿಸಲು ದೃಢನಿಶ್ಚಯವನ್ನು ಪ್ರದರ್ಶಿಸುತ್ತವೆ. ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಜಗತ್ತಿಗೆ ಸಾರುತ್ತಾರೆ' ಎಂದು ಸಂಸದೀಯ ವ್ಯವಹಾರ ಗಳ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

ಸಮಿತಿಯಲ್ಲಿ ಯಾರ್ಯಾರು?

  • ಈ ನಿಯೋಗಗಳಲ್ಲಿ ಸಂಸದರಾದ ಅನುರಾಗ್ ಠಾಕೂರ್, ಅಪರಾಜಿತಾ ಸಾರಂಗಿ, ಮನೀಶ್ ತಿವಾರಿ, ಅಸಾದುದ್ದೀನ್ ಒವೈಸಿ, ಅಮ‌ರ್ ಸಿಂಗ್, ರಾಜೀವ್ ಪ್ರತಾಪ್ ರೂಡಿ, ಸಮಿಕ್ ಭಟ್ಟಾಚಾರ್ಯ, ಬ್ರಿಜ್‌ ಲಾಲ್, ಸರ್ಫರಾಜ್ ಅಹ್ಮದ್, ಪ್ರಿಯಾಂಕಾ ಚತುರ್ವೇದಿ, ವಿಕ್ರಮಜಿತ್ ಸಾಹಿ, ಸಸ್ಮಿತ್ ಪಾತ್ರ ಮತ್ತು ಭುವನೇಶ್ವರ ಕಲಿತಾ ಇರಲಿದ್ದಾರೆ.

  • ಕೇಂದ್ರದ ಮಾಜಿ ಸಚಿವ ಸಲ್ಮಾನ್‌ ಖುರ್ಷಿದ್ ಹಾಲಿ ಸಂಸದರಲ್ಲದೇ ಇದ್ದರೂ, ರಾಜತಾಂತ್ರಿಕ ಪರಿಣತಿ ಗಮನಿಸಿ ಅವರನ್ನೂ ನಿಯೋಗಕ್ಕೆ ಸೇರಿಸಿಕೊಳ್ಳಲಾಗಿದೆ.

ಯಾವ ತಂಡ ಎಲ್ಲೆಲ್ಲಿಗೆ?

  • ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದಲ್ಲಿ ಗುಂಪು ಸೌದಿ ಅರೇಬಿಯಾ, ಕುವೈತ್, ಬಹ್ರೈನ್ ಮತ್ತು ಅಲ್ಜೀರಿಯಾಕ್ಕೆ ಪ್ರಯಾಣಿಸಲಿದೆ. ನಿಯೋಗದಲ್ಲಿ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ, ಫಾಂಗ್ನಾನ್ ಕೊನ್ಯಾಕ್ ಮತ್ತು ರೇಖಾ ಶರ್ಮಾ, ಎಐಎಂಐಎಂನ ಅಸದುದ್ದೀನ್ ಓವೈಸಿ, ನಾಮನಿರ್ದೇಶಿತ ಸಂಸದ ಸತ್ನಮ್ ಸಿಂಗ್ ಸಂಧು ಮತ್ತು ಹಿರಿಯ ರಾಜಕಾರಣಿ ಗುಲಾಮ್ ನಬಿ ಆಜಾದ್ ಇದ್ದಾರೆ. ಮಾಜಿ ವಿದೇಶಾಂಗ ಕಾರ್ಯದರ್ಶಿ ಮತ್ತು ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ ಕೂಡ ಈ ಗುಂಪಿನ ಭಾಗವಾಗಿದ್ದಾರೆ.

  • ಬಿಜೆಪಿಯ ರವಿಶಂಕರ್ ಪ್ರಸಾದ್ ನೇತೃತ್ವದಲ್ಲಿ 2ನೇ ನಿಯೋಗ ಬ್ರಿಟನ್, ಫ್ರಾನ್ಸ್, ಜರ್ಮನಿ, ಯುರೋಪ್, ಇಟಲಿ ಮತ್ತು ಡೆನ್ಮಾರ್ಕ್‌ಗೆ ಭೇಟಿ ನೀಡಲಿದೆ. ಈ ನಿಯೋಗದಲ್ಲಿ ಟಿಡಿಪಿಯ ದಗ್ಗುಬತಿ ಪುರಂದೇಶ್ವರಿ, ಶಿವಸೇನೆ (ಯುಬಿಟಿ)ಯ ಪ್ರಿಯಾಂಕಾ ಚತುರ್ವೇದಿ, ನಾಮನಿರ್ದೇಶಿತ ಸಂಸದ ಗುಲಾಮ್ ಅಲಿ ಖತಾನಾ, ಕಾಂಗ್ರೆಸ್ ಸಂಸದ ಅಮರ್ ಸಿಂಗ್, ಬಿಜೆಪಿಯ ಸಮಿಕ್ ಭಟ್ಟಾಚಾರ್ಯ, ಮತ್ತು ಮಾಜಿ ಸಚಿವ ಎಂ.ಜೆ. ಅಕ್ಬರ್, ಮಾಜಿ ಉಪ ಎನ್‌ಎಸ್‌ಎ ಪಂಕಜ್ ಸರನ್ ಇರಲಿದ್ದಾರೆ.

  • ಜೆಡಿ(ಯು)ನ ಸಂಜಯ್ ಕುಮಾರ್ ಝಾ ನೇತೃತ್ವದ 3 ಗುಂಪು ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಸಿಂಗಾಪುರಕ್ಕೆ ಪ್ರಯಾಣಿಸಲಿದೆ. ಬಿಜೆಪಿ ಸಂಸದರಾದ ಅಪರಾಜಿತಾ ಸಾರಂಗಿ, ಬ್ರಿಜ್ ಲಾಲ್, ಪ್ರದಾನ್ ಬರುವಾ ಮತ್ತು ಹೇಮಾಂಗ್ ಜೋಶಿ, ತೃಣಮೂಲ ಕಾಂಗ್ರೆಸ್ ಸಂಸದ ಯೂಸುಫ್ ಪಠಾಣ್, ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್. ರಾಯಭಾರಿ ಮೋಹನ್ ಕುಮಾರ್ ಈ ಗುಂಪಿನಲ್ಲಿ ಇರಲಿದ್ದಾರೆ.

  • ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ನೇತೃತ್ವದ 4ನೇ ಗುಂಪು, ಯುಎಇ, ಲೈಬೀರಿಯಾ, ಪ್ರಜಾಸತ್ತಾತ್ಮಕ ಗಣರಾಜ್ಯ ಕಾಂಗೋ ಮತ್ತು ಸಿಯೆರಾ ಲಿಯೋನ್ ಪ್ರವಾಸ ಮಾಡಲಿದೆ. ತಂಡದಲ್ಲಿ ಬಿಜೆಪಿ ಸಂಸದರಾದ ಬನ್ಸುರಿ ಸ್ವರಾಜ್, ಅತುಲ್ ಗರ್ಗ್ ಮತ್ತು ಮನನ್ ಕುಮಾರ್ ಮಿಶ್ರಾ, ಐಯುಎಂಎಲ್‌ನ ಇ.ಟಿ. ಮೊಹಮ್ಮದ್ ಬಶೀರ್, ಬಿಜೆಡಿಯ ಡಾ. ಸಸ್ಮಿತ್ ಪತ್ರ ಮತ್ತು ಬಿಜೆಪಿ ನಾಯಕ ಎಸ್.ಎಸ್. ಅಹ್ಲುವಾಲಿಯಾ ಇರಲಿದ್ದಾರೆ. ರಾಯಭಾರಿ ಸುಜನ್ ಚಿನೋಯ್ ಈ ನಿಯೋಗದ ಭಾಗವಾಗಿರಲಿದ್ದಾರೆ.

  • ಕಾಂಗ್ರೆಸ್ ಸಂಸದ ಡಾ. ಶಶಿ ತರೂರ್ ನೇತೃತ್ವದ 5ನೇ ಗುಂಪು, ಅಮೆರಿಕ, ಪನಾಮ, ಗಯಾನಾ, ಬ್ರೆಜಿಲ್ ಮತ್ತು ಕೊಲಂಬಿಯಾದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ನಿಯೋಗದಲ್ಲಿ ಎಲ್‌ಜೆಪಿ (ರಾಮ್ ವಿಲಾಸ್) ಸಂಸದ ಶಾಂಭವಿ, ಜೆಎಂಎಂನ ಡಾ. ಸರ್ಫರಾಜ್ ಅಹ್ಮದ್, ಟಿಡಿಪಿಯ ಜಿ.ಎಂ. ಹರೀಶ್ ಬಾಲಯೋಗಿ, ಬಿಜೆಪಿಯ ಶಶಾಂಕ್ ಮಣಿ ತ್ರಿಪಾಠಿ ಮತ್ತು ಭುವನೇಶ್ವರ್ ಕಲಿತಾ, ಶಿವಸೇನೆಯ ಮಿಲಿಂದ್ ದಿಯೋರಾ ಇದ್ದಾರೆ. ಅಮೆರಿಕಾದ ಮಾಜಿ ರಾಯಭಾರಿ ತರಂಜಿತ್ ಸಿಂಗ್ ಸಂಧು ಮತ್ತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ಈ ತಂಡದಲ್ಲಿರಲಿದ್ದಾರೆ.

  • ಡಿಎಂಕೆಯ ಕನಿಮೋಳಿ ಕರುಣಾನಿಧಿ ನೇತೃತ್ವದ 6ನೇ ಗುಂಪು, ಗ್ರೀಸ್, ಸ್ಲೊವೇನಿಯಾ, ಲಾಟ್ವಿಯಾ ಮತ್ತು ರಷ್ಯಾಕ್ಕೆ ಪ್ರಯಾಣಿಸಲಿದೆ. ಗುಂಪಿನಲ್ಲಿ ಎಸ್‌ಪಿಯ ರಾಜೀವ್ ರೈ, ಎನ್‌ಸಿಯ ಮಿಯಾನ್ ಅಲ್ತಾಫ್ ಅಹ್ಮದ್, ಬಿಜೆಪಿಯ ಬ್ರಿಜೇಶ್ ಚೌಟಾ, ಆರ್‌ಜೆಡಿಯ ಪ್ರೇಮ್ ಚಂದ್ ಗುಪ್ತಾ ಮತ್ತು ಎಎಪಿಯ ಡಾ. ಅಶೋಕ್ ಕುಮಾರ್ ಮಿತ್ತಲ್ ಇರಲಿದ್ದಾರೆ. ಹಿರಿಯ ರಾಜತಾಂತ್ರಿಕರಾದ ಮಂಜೀವ್ ಸಿಂಗ್ ಪುರಿ ಮತ್ತು ಜಾವೇದ್ ಅಶ್ರಫ್ ನಿಯೋಗವನ್ನು ಮುನ್ನಡೆಸಲಿದ್ದಾರೆ.

  • ಎನ್‌ಸಿಪಿ (ಶರದ್ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ ನೇತೃತ್ವದ 7ನೇ ತಂಡ ಈಜಿಪ್ಟ್, ಕತಾರ್, ಇಥಿಯೋಪಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಲಿದ್ದಾರೆ. ಅವರೊಂದಿಗೆ ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ, ಅನುರಾಗ್ ಠಾಕೂರ್, ಎಎಪಿಯ ವಿಕ್ರಮ್‌ಜೀತ್ ಸಿಂಗ್ ಸಹ್ನಿ, ಕಾಂಗ್ರೆಸ್‌ನ ಮನೀಶ್ ತಿವಾರಿ ಮತ್ತು ಟಿಡಿಪಿಯ ಲಾವು ಶ್ರೀ ಕೃಷ್ಣ ದೇವರಾಯಲು ಇರಲಿದ್ದಾರೆ. ರಾಯಭಾರಿ ಸೈಯದ್ ಅಕ್ಬರುದ್ದೀನ್ ಜೊತೆಗೆ ಹಿರಿಯ ನಾಯಕರಾದ ಆನಂದ್ ಶರ್ಮಾ ಮತ್ತು ವಿ. ಮುರಳೀಧರನ್ ಕೂಡ ಈ ನಿಯೋಗದಲ್ಲಿರಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com