
ಪಾಟ್ನಾ: ಬಿಹಾರದ ರಾಷ್ಟ್ರೀಯ ಜನಾತಾದಳ ಪಕ್ಷದಲ್ಲಿನ ಆಂತರಿಕ ಕಲಹ ಮತ್ತು ಲಾಲು ಕುಟುಂಬದಲ್ಲಿನ ಬೆಳವಣಿಗೆಗಳು ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಅಣ್ಣ ತೇಜ್ ಪ್ರತಾಪ್ ವಿರುದ್ಧ ತಮ್ಮ ತೇಜಸ್ವಿ ಯಾದವ್ ಕಿಡಿಕಾರಿದ್ದಾರೆ.
ಮದುವೆ ಮತ್ತು ಪ್ರೀತಿ ವಿಚಾರವಾಗಿ ವ್ಯಾಪಕ ವಿವಾದಕ್ಕೆ ಗುರಿಯಾಗಿ ಪಕ್ಷದಿಂದ ಉಚ್ಚಾಟನೆಯಾಗಿರುವ ಸಹೋದರ ತೇಜ್ ಪ್ರತಾಪ್ ವಿರುದ್ಧ ಅವರ ತಮ್ಮ ಹಾಗೂ ಲಾಲು ಪ್ರಸಾದ್ ಕಿರಿಯ ಪುತ್ರ ತೇಜ್ ಪ್ರತಾಪ್ ಕಿಡಿಕಾರಿದ್ದು, ಇಂತಹುವುಗಳನ್ನೆಲ್ಲಾ ಸಹಿಸಲಸಾಧ್ಯ ಎಂದು ಹೇಳಿದ್ದಾರೆ.
ತೇಜ್ ಪ್ರತಾಪ್ ವಿವಾದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಯಾದವ್, 'ಸಹೋದರ ತೇಜ್ ಪ್ರತಾಪ್ ಯಾದವ್ ವಯಸ್ಕರಾಗಿದ್ದು, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾರೆ ಎಂದರು.
ಆದರೆ ಅವರ ಸಹೋದರನ ಉಚ್ಚಾಟನೆಯ ಬಗ್ಗೆ ಅವರ ತಂದೆಯ ನಿರ್ಧಾರವು ಮಾನ್ಯವಾಗಿದೆ ಮತ್ತು ಪಕ್ಷವು "ಇಂತಹ ವಿಷಯಗಳನ್ನು" ಸಹಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
'ನಾವು ಇಂತಹ ವಿಷಯಗಳನ್ನು ಸಹಿಸಲು ಸಾಧ್ಯವಿಲ್ಲ, ನಾವು ಕೆಲಸ ಮಾಡುತ್ತಿದ್ದೇವೆ ಮತ್ತು ಬಿಹಾರದ ಜನರಿಗೆ ಸಮರ್ಪಿತರಾಗಿದ್ದೇವೆ. ನನ್ನ ಅಣ್ಣನ ವಿಷಯಕ್ಕೆ ಬಂದರೆ, ರಾಜಕೀಯ ಜೀವನ ಮತ್ತು ವೈಯಕ್ತಿಕ ಜೀವನ ಬೇರೆ ಬೇರೆ.
ಅವರಿಗೆ ತಮ್ಮ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿದೆ... ನಮ್ಮ ಪಕ್ಷದ ಮುಖ್ಯಸ್ಥರು ನಿಲುವು ಸ್ಪಷ್ಟಪಡಿಸಿದ್ದಾರೆ. ನಾವು ಅದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.
Advertisement