
ಮಾಸ್ಕೋ: ರಷ್ಯಾದ ಭದ್ರತಾ ಮಂಡಳಿ ಮುಂದಿನ ವಾರದ ಆರಂಭದಲ್ಲಿ ಮಾಸ್ಕೋದಲ್ಲಿ ಆಯೋಜಿಸಿರುವ ಪ್ರಮುಖ ಭದ್ರತಾ ಸಭೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗವಹಿಸುವ ನಿರೀಕ್ಷೆ ಇದೆ.
ಮೇ 27-29 ರಂದು ರಷ್ಯಾದ ಒಕ್ಕೂಟದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆಯ್ ಶೋಯಿಗು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಭದ್ರತಾ ವಿಷಯಗಳಿಗೆ ಸಂಬಂಧಿಸಿದ ಉನ್ನತ ಪ್ರತಿನಿಧಿಗಳ 13ನೇ ಅಂತರರಾಷ್ಟ್ರೀಯ ಸಭೆಗೆ ದೋವಲ್ ಅವರನ್ನು ಆಹ್ವಾನಿಸಲಾಗಿದೆ.
"ಜಾಗತಿಕ ದಕ್ಷಿಣ ಮತ್ತು ಪೂರ್ವದ 150 ಕ್ಕೂ ಹೆಚ್ಚು ದೇಶಗಳು, CIS, ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆ (CSTO), ಯುರೇಷಿಯನ್ ಆರ್ಥಿಕ ಒಕ್ಕೂಟ (EAEU), ಶಾಂಘೈ ಸಹಕಾರ ಸಂಸ್ಥೆ (SCO) ದೇಶಗಳು ಹಾಗೂ 20ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸಂಸ್ಥೆಗಳ ನಾಯಕತ್ವಕ್ಕೆ ವೇದಿಕೆಯಲ್ಲಿ ಭಾಗವಹಿಸಲು ಆಹ್ವಾನಗಳನ್ನು ಕಳುಹಿಸಲಾಗಿದೆ" ಎಂದು ರಷ್ಯಾದ ಭದ್ರತಾ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಂತೆಯೇ, ಪಾಕಿಸ್ತಾನವೂ SCO ನ ಸದಸ್ಯ ರಾಷ್ಟ್ರವಾಗಿದ್ದು, ಅದರ NSA ಲೆಫ್ಟಿನೆಂಟ್ ಜನರಲ್ ಅಸಿಮ್ ಮಲಿಕ್ ಕೂಡ ಮಾಸ್ಕೋದಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ಆಪರೇಷನ್ ಸಿಂಧೂರ್ ನಂತರ, ಭಾರತೀಯ ಮತ್ತು ಪಾಕಿಸ್ತಾನಿ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮಾಸ್ಕೋದಲ್ಲಿ ಮುಖಾಮುಖಿಯಾಗಲಿದ್ದಾರೆ ಮತ್ತು ರಷ್ಯಾದ ಭಾರತ-ಪಾಕ್ ಎನ್ಎಸ್ಎಗಳ ಮುಖಾಮುಖಿ ಸಭೆಯನ್ನು ಆಯೋಜಿಸಬಹುದು ಎಂಬ ಊಹಾಪೋಹಗಳಿವೆ ಎಂದು ಪ್ರಮುಖ ವ್ಯಾಪಾರ ದಿನಪತ್ರಿಕೆ 'ಕೊಮ್ಮರ್‌ಸಾಂಟ್' ನ ದಕ್ಷಿಣ ಏಷ್ಯಾ ಅಂಕಣಕಾರ ಸೆರ್ಗೆಯ್ ಸ್ಟ್ರೋಕನ್ ಮಾಸ್ಕೋದಲ್ಲಿ ಪಿಟಿಐಗೆ ತಿಳಿಸಿದ್ದಾರೆ.
ಶುಕ್ರವಾರ ದ್ರಾವಿಡ ಮುನ್ನೇತ್ರ ಕಳಗಂ ಸಂಸದೆ ಕನಿಮೋಳಿ ಕರುಣಾನಿಧಿ ನೇತೃತ್ವದ ಬಹುಪಕ್ಷ ಸಂಸದೀಯ ನಿಯೋಗವನ್ನು ಸ್ವಾಗತಿಸುವಾಗ ಉಪ ವಿದೇಶಾಂಗ ಸಚಿವ ಆಂಡ್ರೆ ರುಡೆಂಕೊ ಭಯೋತ್ಪಾದನೆಯ ವಿರುದ್ಧ ಜಂಟಿಯಾಗಿ ಹೋರಾಡುವುದಾಗಿ ಮತ್ತು ಭಯೋತ್ಪಾದನೆಯ ಎಲ್ಲಾ ಅಭಿವ್ಯಕ್ತಿಗಳ ವಿರುದ್ಧ ನಿರ್ಣಾಯಕ ಹೋರಾಟದಲ್ಲಿ ನಿಕಟ ಸಹಕಾರಕ್ಕಾಗಿ ಯುಎನ್, ಬ್ರಿಕ್ಸ್ ಮತ್ತು ಎಸ್‌ಸಿಒ ವೇದಿಕೆಗಳನ್ನು ಬಳಸುವುದಾಗಿ ಭರವಸೆ ನೀಡಿದ್ದರು ಎಂದು ಸೆರ್ಗೆಯ್ ಸ್ಟ್ರೋಕನ್ ನೆನಪಿಸಿಕೊಂಡಿದ್ದಾರೆ.
ಏಪ್ರಿಲ್ 22 ರಂದು 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಮೇ7 ರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯದ ಮೇಲೆ ಆಪರೇಷನ್ ಸಿಂದೂರ್‌ನ ಭಾಗವಾಗಿ ಭಾರತ ನಿಖರವಾದ ದಾಳಿಗಳನ್ನು ನಡೆಸಿತು.
ಇದರ ನಂತರ ಮೇ 8, 9 ಮತ್ತು 10 ರಂದು ಪಾಕಿಸ್ತಾನ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು. ಪಾಕಿಸ್ತಾನದ ಕ್ರಮಗಳಿಗೆ ಭಾರತ ಬಲವಾಗಿ ಪ್ರತಿಕ್ರಿಯಿಸಿತ್ತು.
ಮೇ 10 ರಂದು ಎರಡೂ ಕಡೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ಮಾತುಕತೆಯ ನಂತರ ಮಿಲಿಟರಿ ಕ್ರಮಗಳನ್ನು ನಿಲ್ಲಿಸುವ ಬಗ್ಗೆ ತಿಳುವಳಿಕೆಯೊಂದಿಗೆ ಯುದ್ಧದ ಸನ್ನಿವೇಶಗಳು ಕೊನೆಗೊಂಡಿದ್ದವು.
Advertisement