
ನವದೆಹಲಿ: ದೇಶದ ಹಲವೆಡೆ ಜೂನ್ ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದ್ದು, ಗರಿಷ್ಠ ತಾಪಮಾನ ದಾಖಲಾಗುವ ಪ್ರದೇಶಗಳಲ್ಲಿ ಉಷ್ಣಾಂಶ ತಗ್ಗಿಸಲು ನೆರವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರವಿಚಂದ್ರನ್, ಜೂನ್ ನಲ್ಲಿ ವಾಡಿಕೆಯಂತೆ ಸರಾಸರಿ 166. 9 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ ಶೇ, 108 ರಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ದೇಶದ ಬಹುತೇಕ ಕಡೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದರು.
IMD ಮಹಾನಿರ್ದೇಶಕ ಮೃತ್ಯುಂಜಯ ಮೋಹಪಾತ್ರ, ಉತ್ತಮ ಮಳೆಯ ನಿರೀಕ್ಷೆಯಿದ್ದು, ವಾಯುವ್ಯ ಮತ್ತು ಈಶಾನ್ಯ ಭಾರತ ಹೊರತುಪಡಿಸಿ ದೇಶದ ಹಲವು ಭಾಗಗಳಲ್ಲಿ ಜೂನ್ ನಲ್ಲಿ ದಾಖಲಾಗುತ್ತಿದ್ದ ಗರಿಷ್ಠ ಉಷ್ಣಾಂಶ ತಗ್ಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಜೂನ್ ನಿಂದ ಸೆಪ್ಟೆಂಬರ್ ವರೆಗೂ ಶೇ. 106 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಈಶಾನ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಕೇಂದ್ರ ಭಾಗ ಹಾಗೂ ದಕ್ಷಿಣದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಅವರು ಹೇಳಿದರು.
Advertisement