
ನವದೆಹಲಿ: ದೆಹಲಿ ಪೊಲೀಸರು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ರಾಷ್ಟ್ರ ರಾಜಧಾನಿಯ ವಿವಿಧ ಕಡೆಗಳಲ್ಲಿ ನೆಲೆಸಿದ್ದ ಮೂವರು ಮಕ್ಕಳು ಸೇರಿದಂತೆ 9 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ದೂರೆತ ಖಚಿತ ಮಾಹಿತಿ ಆಧಾರದ ಮೇಲೆ ತಂಡವು ಮೇ 25 ರಂದು ನರೇಲಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದು, ಅವರು ಮಾನ್ಯವಾದ ಯಾವುದೇ ದಾಖಲೆ ನೀಡುವಲ್ಲಿ ವಿಫಲರಾಗಿದ್ದಾರೆ.
ಯಾವುದೇ ಗುರುತಿನ ದಾಖಲೆಗಳಿಲ್ಲದೆ ರಸ್ತೆಬದಿಯಲ್ಲಿ ಉಳಿದುಕೊಂಡಿದ್ದ ನಾಲ್ವರು ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಾ ಬದುಕುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ ನಡೆಸಿದ ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಆನಂದ್ ವಿಹಾರ್ ಪ್ರದೇಶದಿಂದ ಮೂವರು ಅಪ್ರಾಪ್ತ ಮಕ್ಕಳು ಸೇರಿದಂತೆ ಐವರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಬಂಧಿತರು ಅನಧಿಕೃತವಾಗಿ ನದಿ ಮಾರ್ಗಗಳ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದು, ಯಾವುದೇ ದಾಖಲೆಗಳಿಲ್ಲದೆ ಪೂರ್ವ ದೆಹಲಿಯಲ್ಲಿ ವಾಸಿಸುತ್ತಿದ್ದರು ಎಂದು ಅವರು ಹೇಳಿದರು.
ಎಲ್ಲಾ ಒಂಬತ್ತು ಮಂದಿ ಪ್ರಸ್ತುತ ಬಂಧನ ಕೇಂದ್ರಗಳಲ್ಲಿದ್ದು, ಅವರನ್ನು ಗಡೀಪಾರು ಮಾಡಲಾಗುವುದು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ರಮ ವಲಸಿಗರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕಳೆದ ವರ್ಷ ನವೆಂಬರ್ 19ರಂದು ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಲ್ಲಿಯವರೆಗೆ, 20 ಬಾಂಗ್ಲಾದೇಶಿ ಪ್ರಜೆಗಳನ್ನು ಪೂರ್ವ ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ.
Advertisement