

ನವದೆಹಲಿ: ಜವಾಹರಲಾಲ್ ನೆಹರು ಅವರು ಕಾಶ್ಮೀರವನ್ನೂ ಭಾರತದೊಂದಿಗೆ ವಿಲೀನಗೊಳಿಸಲು ಬಯಸಿರಲಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಶನಿವಾರ ತಿರುಗೇಟು ನೀಡಿದ್ದಾರೆ. ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ನಡುವಿನ ಪತ್ರ ವ್ಯವಹಾರವನ್ನು ಓದಲು ಮತ್ತು ಅಂದಿನ ಸಂವಿಧಾನ ಸಭೆಯ ಚರ್ಚೆಗಳನ್ನು ಪರಿಶೀಲಿಸುವಂತೆ ಸವಾಲು ಹಾಕಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಖರ್ಗೆ, ಹಿಂದೂ ಮಹಾಸಭಾ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ನಂತರದ ಜನಸಂಘದ ನಾಯಕರು ಕಾಶ್ಮೀರವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಬೇಕು ಎಂದು ಹೇಳಿಕೆಗಳನ್ನು ನೀಡಿದರು ಎಂದು ಆರೋಪಿಸಿದರು. ಪಟೇಲರು ಕಾಶ್ಮೀರವನ್ನು ಭಾರತೀಯ ಒಕ್ಕೂಟಕ್ಕೆ ಸಂಪೂರ್ಣವಾಗಿ ವಿಲೀನಗೊಳಿಸುವುದಕ್ಕೆ ಬಯಸಿದ್ದರು. ಆದರೆ ನೆಹರು ಬಿಟ್ಟಿರಲಿಲ್ಲ ಎಂದು ಪ್ರಧಾನಿ ಮೋದಿ ಶುಕ್ರವಾರ ಹೇಳಿದ್ದರು.
ಪ್ರಧಾನಿ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಖರ್ಗೆ, ಸಾವರ್ಕರ್ ಮತ್ತು ಎಂಎಸ್ ಗೋಲ್ವಾಲ್ಕರ್ ಇಬ್ಬರೂ ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರ ಗೆಸ್ಟ್ ಗಳಾಗಿದ್ದರು. ಹಿಂದೂ ಮಹಾಸಭಾ ಭಾರತದೊಂದಿಗೆ ವಿಲೀನದ ಬದಲು ಸ್ವತಂತ್ರ ಕಾಶ್ಮೀರಕ್ಕೆ ತನ್ನ ಬೆಂಬಲವನ್ನು ಘೋಷಿಸಿತ್ತು. ಪಂಡಿತ್ ಜವಾಹರಲಾಲ್ ನೆಹರು ಅವರು ಕಾಶ್ಮೀರವನ್ನು ಭಾರತಕ್ಕೆ ಸೇರಿಸುವುದನ್ನು ಬಯಸಲಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಜಿಯವರ ಹೇಳಿಕೆ ಸಂಪೂರ್ಣ ಸುಳ್ಳು ಮತ್ತು ಖಂಡನೀಯವಾಗಿದೆ ಎಂದು ಖರ್ಗೆ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಲೀನ ಪ್ರಕ್ರಿಯೆಯಲ್ಲಿ ನೆಹರೂ ಅವರು ಶೇಖ್ ಅಬ್ದುಲ್ಲಾ ಅವರೊಂದಿಗೆ ಸಂಪರ್ಕದಲ್ಲಿದ್ದರೆ, ಪಟೇಲ್ ಅವರು ಹರಿ ಸಿಂಗ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಅವರು ಈ ಪ್ರದೇಶದ ಜನರ ಹಿತಾಸಕ್ತಿಯಿಂದ ಭಾರತದೊಂದಿಗೆ ವಿಲೀನಕ್ಕೆ ಇಬ್ಬರು ಕಾಶ್ಮೀರಿ ನಾಯಕರನ್ನು ಮನವೊಲಿಸಿದ್ದರು ಎಂದು ಖರ್ಗೆ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಲೀನ ಸಮಯದಲ್ಲಿ ಪಟೇಲ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ವಿ ಶಂಕರ್ ಅವರು ಪಟೇಲ್ ಮತ್ತು ಇತರ ನಾಯಕರ ನಡುವಿನ ಪತ್ರ ವ್ಯವಹಾರವನ್ನು "ಸೆಲೆಕ್ಟೆಡ್ ಕರೆಸ್ಪಾಂಡೆನ್ಸ್ ಆಫ್ ಸರ್ದಾರ್ ಪಟೇಲ್" ಎಂಬ ಪುಸ್ತಕದಲ್ಲಿ ಸಂಗ್ರಹಿಸಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
"ಈ ಪುಸ್ತಕದ ಮೊದಲ ಸಂಪುಟದಲ್ಲಿ, ಪಂಡಿತ್ ನೆಹರು ಮತ್ತು ಸರ್ದಾರ್ ಪಟೇಲ್ ಇಬ್ಬರೂ ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಸೇರಿಸುವಲ್ಲಿ ಸಮಾನ ಆಸಕ್ತಿ ಹೊಂದಿದ್ದಾರೆ ಎಂದು ವಿ ಶಂಕರ್ ಸ್ಪಷ್ಟವಾಗಿ ಬರೆದಿದ್ದಾರೆ. ಪುಸ್ತಕದಲ್ಲಿಯೇ ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ಬಗ್ಗೆ ಕನಿಷ್ಠ 50 ಪತ್ರಗಳ ಸಂಗ್ರಹವಿದೆ. ಪಂಡಿತ್ ನೆಹರು ಅವರು ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗದಿದ್ದರೆ, ಆ ಸಮಯದಲ್ಲಿ ಸರ್ದಾರ್ ಪಟೇಲ್ ಮತ್ತು ಪಂಡಿತ್ ನೆಹರು ನಡುವೆ ಇಷ್ಟೊಂದು ಪತ್ರ ವ್ಯವಹಾರ ನಡೆಯುತ್ತಿತ್ತೇ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಅಕ್ಟೋಬರ್ 1947 ರ ಕೊನೆಯ ವಾರದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬುಡಕಟ್ಟು ಆಕ್ರಮಣಕ್ಕೆ ಸುಮಾರು ಒಂದು ತಿಂಗಳ ಮೊದಲು ಸೆಪ್ಟೆಂಬರ್ 27 ರಂದು ಪಟೇಲ್‌ಗೆ ನೆಹರು ಪತ್ರ ಬರೆದಿದ್ದು, ಬುಡಕಟ್ಟು ಜನಾಂಗದವರ ಸೋಗಿನಲ್ಲಿ ಪಾಕಿಸ್ತಾನ ಈ ಪ್ರದೇಶದ ಮೇಲೆ ದಾಳಿ ಮಾಡಲು ಯೋಜಿಸುತ್ತಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪಾಕಿಸ್ತಾನದ ಸಂಚು ಮತ್ತು ತಂತ್ರವನ್ನು ನೆಹರು ವಿವರಿಸಿದ್ದಾರೆ. ಚಳಿಗಾಲದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೋರಾಡುವುದು ಕಷ್ಟಕರವಾಗಲಿದೆ, ಆದ್ದರಿಂದ ತಕ್ಷಣವೇ ಭಾರತಕ್ಕೆ ರಾಜ್ಯವನ್ನು ಸೇರಿಸುವುದನ್ನು ತ್ವರಿತಗೊಳಿಸಬೇಕು ಎಂದು ಪಟೇಲ್ ಅವರಿಗೆ ನೆಹರು ಹೇಳಿದ್ದರು.
"ಈ ಪತ್ರದ ನಂತರ, ಅಕ್ಟೋಬರ್ 2, 1947 ರಂದು, ಸರ್ದಾರ್ ಪಟೇಲ್ ಅವರು ಜಮ್ಮು ಕಾಶ್ಮೀರದ ಮಹಾರಾಜರಿಗೆ ಪತ್ರ ಬರೆದು, ಸಾಧ್ಯವಾದಷ್ಟು ಬೇಗ ಭಾರತಕ್ಕೆ ವಿಲೀನಗೊಳಿಸುವಂತೆ ಒತ್ತಾಯಿಸಿದ್ದರು. ಅಕ್ಟೋಬರ್ 5, 1947 ರಂದು, ನೆಹರು ಮತ್ತೊಮ್ಮೆ ಪಟೇಲರಿಗೆ ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ಅಗತ್ಯವನ್ನು ಹೇಳಿದ್ದರು.
"ದುರಾದೃಷ್ಟವಶಾತ್, ಪಂಡಿತ್ ನೆಹರು ಮತ್ತು ಸರ್ದಾರ್ ಪಟೇಲ್ ಅವರ ಮನವೊಲಿಕೆಯ ಹೊರತಾಗಿಯೂ, ಜಮ್ಮು ಕಾಶ್ಮೀರದ ಮಹಾರಾಜರು ತಕ್ಷಣದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ಮುನ್ನಾಪಾಕಿಸ್ತಾನವು ಬುಡಕಟ್ಟು ಆಕ್ರಮಣವನ್ನು ಪ್ರಾರಂಭಿಸಿತು" ಎಂದು ಖರ್ಗೆ ತಿಳಿಸಿದ್ದಾರೆ.
Advertisement