

ಜುನಾಗಢ: ಗುಜರಾತ್‌ನ ಜುನಾಗಢದ ಶೋಭವದಲಾ ಗ್ರಾಮದ ಖೋಡಿಯಾರ್ ಆಶ್ರಮದಲ್ಲಿ 15 ವರ್ಷದ ಅಪ್ರಾಪ್ತ ಬಾಲಕನೊಬ್ಬ ತನ್ನ ಅಣ್ಣ ಮತ್ತು ಗರ್ಭಿಣಿ ಅತ್ತಿಗೆಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ತನ್ನ ಅತ್ತಿಗೆಯನ್ನು ಕೊಲ್ಲುವ ಮೊದಲು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದನು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಮಹಿಳೆಯ ಹೊಟ್ಟೆಗೆ ಬಲವಾಗಿ ಒದ್ದಿದ್ದರಿಂದ ಆಕೆಯ 6 ತಿಂಗಳ ಭ್ರೂಣ ಗರ್ಭದಿಂದ ಹೊರಗೆ ಬಂದಿತ್ತು. ಈ ಘಟನೆ ಅಕ್ಟೋಬರ್ 16ರಂದು ನಡೆದಿದ್ದೂ ಅಕ್ಟೋಬರ್ 31ರ ಶುಕ್ರವಾರ ಬೆಳಕಿಗೆ ಬಂದಿತು. ಆರೋಪಿಯು ತನ್ನ ಸಹೋದರ ಮತ್ತು ಅತ್ತಿಗೆಯ ಶವಗಳನ್ನು ಮನೆಯಲ್ಲಿ ಬೆತ್ತಲೆಯಾಗಿ ಹೂತುಹಾಕಿದ್ದನು.
ಕೊಲೆ ಮಾಡಿದ ನಂತರ ಆರೋಪಿ ಅವರ ಬಟ್ಟೆಗಳಿಗೆ ಬೆಂಕಿ ಹಚ್ಚಿ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದನು. ಆರೋಪಿಗೆ ಆತನ ಅಣ್ಣ ಮತ್ತು ಅತ್ತಿಗೆಯ ಶವಗಳನ್ನು ಮನೆಯಲ್ಲಿ ಹೂಳಲು ಆರೋಪಿಯ ತಾಯಿ ಸಹಾಯ ಮಾಡಿದಳು. ಅಕ್ಟೋಬರ್ 31ರಂದು ಪೊಲೀಸರು ಆಶ್ರಮಕ್ಕೆ ಹೋಗಿ ಆಶ್ರಮದ ಹಿಂದಿನ ಮನೆಯಿಂದ ಗಂಡ, ಹೆಂಡತಿ ಮತ್ತು ನವಜಾತ ಶಿಶುವಿನ ಕೊಳೆತ ಶವಗಳನ್ನು ವಶಪಡಿಸಿಕೊಂಡಿದ್ದು ಆರೋಪಿಯನ್ನು ಸಹ ಬಂಧಿಸಿದ್ದಾರೆ. ಮೃತರನ್ನು ಶಿವಮಗಿರಿ (22 ವರ್ಷ) ಮತ್ತು ಆತನ ಪತ್ನಿ ಕಾಂಚನ್ ಕುಮಾರಿ (19) ಎಂದು ಗುರುತಿಸಲಾಗಿದೆ. ಶಿವಮಗಿರಿ ಆಶ್ರಮದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು. ಆರೋಪಿಗಳು ಗೋಶಾಲೆಯಲ್ಲಿ ಹಸುಗಳಿಗೆ ಸೇವೆ ಸಲ್ಲಿಸುತ್ತಿದ್ದರು.
ಮಲಗಿದ್ದಾಗ ಸಹೋದರನ ಮೇಲೆ ಆರೋಪಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದನು. ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮದ್ಯದ ಚಟ ಹೊಂದಿದ್ದು ಇದು ಮನೆಯಲ್ಲಿ ಆಗಾಗ್ಗೆ ಜಗಳಗಳಿಗೆ ಕಾರಣವಾಗುತ್ತಿತ್ತು. ಕುಡಿಯುವುದನ್ನು ಬಿಡುವಂತೆ ಸಹೋದರ ಪದೇ ಪದೇ ಹೇಳುತ್ತಿದ್ದನು. ಇದು ಆರೋಪಿಗೆ ಅಣ್ಣನ ಮೇಲೆ ದ್ವೇಷ ಮೂಡಲು ಕಾರಣವಾಯಿತು. ಅಲ್ಲದೆ ಅಣ್ಣ ತನ್ನ ತಮ್ಮನಿಗೆ ಬರುತ್ತಿದ್ದ ಸಂಬಳದ ಹಣವನ್ನು ತಾನೇ ಇಟ್ಟುಕೊಳ್ಳುತ್ತಿದ್ದನು. ಇದು ಅಪ್ರಾಪ್ತ ಬಾಲಕ ತನ್ನ ಸಹೋದರನನ್ನು ಕೊಲ್ಲಲು ನಿರ್ಧರಿಸಲು ಪ್ರೇರೇಪಿಸಿತು. ಅಕ್ಟೋಬರ್ 16ರ ಬೆಳಿಗ್ಗೆ ಅಣ್ಣ ಮಲಗಿದ್ದಾಗ, ಆರೋಪಿ ಕಬ್ಬಿಣದ ರಾಡ್‌ನಿಂದ ಅವರ ತಲೆಯ ಮೇಲೆ ಹಲ್ಲೆ ನಡೆಸಿದ್ದನು. ಅಲ್ಲದೆ ಆತ ಸಾಯುವವರೆಗೂ ಹೊಡೆಯುತ್ತಲೇ ಇದ್ದನು. ಪತಿಯ ಕಿರುಚಾಟ ಕೇಳಿ ಅಲ್ಲಿಗೆ ಪತ್ನಿ ಕಾಂಚನ್ ಬಂದಿದ್ದಾಳೆ. ಮೈದುನ ತನ್ನನ್ನು ಕೊಲ್ಲುತ್ತಾನೆ ಎಂದು ಭಾವಿಸಿ ಆಕೆ ಬಿಟ್ಟುಬಿಡುವಂತೆ ಕೇಳಿಕೊಂಡಿದ್ದಾನೆ.
ಆದರೆ ಕ್ರೋಧದಲ್ಲಿದ್ದ ಆರೋಪಿ ತನ್ನ ಕೊಲೆ ರಹಸ್ಯ ಹೊರಗೆ ಬರುತ್ತದೆ ಎಂದು ಹೆದರಿದ್ದಾನೆ. ಕೂಡಲೇ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದಾನೆ. ಕೊಲ್ಲುವ ಮೊದಲು ಆಕೆಯನ್ನು ರೇಪ್ ಮಾಡಿದ್ದಾನೆ. ನಂತರ ಹೊಟ್ಟೆ ಮೇಲೆ ಕುಳಿತುಕೊಂಡು ಜೋರಾಗಿ ಕತ್ತು ಹಿಸುಕಿದ್ದಾನೆ. ಈ ವೇಳೆ ಒತ್ತಡ ಹೆಚ್ಚಾಗಿ ಹೊಟ್ಟೆಯಲ್ಲಿದ್ದ ಭ್ರೂಣ ಹೊರಕ್ಕೆ ಬಂದಿದ್ದು ಮಹಿಳೆ ಸಾವನ್ನಪ್ಪಿದ್ದಳು. ನಂತರ ಆರೋಪಿ ಮನೆಯಲ್ಲೇ ಐದು ಅಡಿ ಆಳದ ಗುಂಡಿಯನ್ನು ಅಗೆದು ಶವಗಳನ್ನು ಹೂತು ಹಾಕಿದ್ದನು.
ಕೊಲೆ ರಹಸ್ಯ ಬಯಲಿಗೆ ಬಂದಿದ್ದೇಗೆ?
ಮೃತ ಮಹಿಳೆಯ ಪೋಷಕರು ತಮ್ಮ ಮಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ದೀಪಾವಳಿಯ ಸಮಯದಲ್ಲಿ ಮಗಳನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಅನುಮಾನಗೊಂಡ ಪೋಷಕರು ಅಳಿಯನಿಗೂ ಫೋನ್ ಮಾಡಿದ್ದಾರೆ. ಆದರೆ ಅಳಿಯನೂ ಸಂಪರ್ಕಕ್ಕೆ ಸಿಗಲಿಲ್ಲ. ಕೊನೆಗೆ ಅಳಿಯನ ತಾಯಿ ಕರೆಗೆ ಉತ್ತರಿಸಿ ಮಗ ಮತ್ತು ಸೊಸೆ ಗುಜರಾತ್‌ನ ಹಿಮ್ಮತ್‌ನಗರ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಮಹಿಳೆಯ ಪೋಷಕರು ಅಪಘಾತದ ಫೋಟೋಗಳು, ವೀಡಿಯೊಗಳು ಅಥವಾ ಯಾವುದೇ ದಾಖಲೆಗಳನ್ನು ಕೇಳಿದಾಗ ಅವರು ತಬ್ಬಿಬ್ಬಾದರು. ಇದರಿಂದ ಪೋಷಕರು ಪೊಲೀಸರಿಗೆ ದೂರು ನೀಡಿದ್ದು ವಿಚಾರಣೆ ವೇಳೆ ಪ್ರಕರಣ ಬಯಲಿಗೆ ಬಂದಿದೆ.
Advertisement