

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪುತ್ರ ಭಾಗಿಯಾಗಿರುವ ಪುಣೆ ಭೂ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ವೋಟ್ ಚೋರಿ ನಂತರ ಈಗ ಪುಣೆಯಲ್ಲಿ ಭೂಮಿ ಚೋರಿ" ಎಂದು ಟೀಕಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಶುಕ್ರವಾರ ಪ್ರಶ್ನಿಸಿದ್ದಾರೆ.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ, ದಲಿತರಿಗೆ ಮೀಸಲಾಗಿದ್ದ 1,800 ಕೋಟಿ ರೂ. ಮೌಲ್ಯದ ಮಹಾರಾಷ್ಟ್ರದ ಸರ್ಕಾರಿ ಭೂಮಿಯನ್ನು ಅಜಿತ್ ಪವಾರ್ ಅವರ ಮಗನ ಒಡೆತನದ ಕಂಪನಿಗೆ ಕೇವಲ 300 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಜಿತ್ ಪವಾರ್ ಅವರ ಪುತ್ರ ಪಾರ್ಥ್ ಪವಾರ್ ಅವರ ಸಂಸ್ಥೆಯು 40 ಎಕರೆ ಭೂಮಿಯನ್ನು ಕೇವಲ 300 ಕೋಟಿ ರೂ. ಗೆ ಖರೀದಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ಅದರ ಜೊತೆಗೆ, ಸ್ಟಾಂಪ್ ಡ್ಯೂಟಿಯನ್ನು ಸಹ ಮನ್ನಾ ಮಾಡಲಾಗಿದೆ - ಅಂದರೆ ಇದು ದರೋಡೆ ಮಾತ್ರವಲ್ಲ, ಕಳ್ಳತನದ ಮೇಲೆ ಕಾನೂನುಬದ್ಧ ಅನುಮೋದನೆಯ ಮುದ್ರೆಯೂ ಬಿದ್ದಿದೆ" ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.
ಇದು "ವೋಟ್ ಕಳ್ಳತನದ" ಮೂಲಕ ಅಧಿಕಾರಕ್ಕೆ ಬಂದ ಸರ್ಕಾರದಿಂದ "ಭೂ ಕಳ್ಳತನ" ಎಂದು ಅವರು ಟೀಕಿಸಿದ್ದಾರೆ.
"ಎಷ್ಟೇ ಲೂಟಿ ಮಾಡಿದರೂ, ಮತಗಳನ್ನು ಕದಿಯುವ ಮೂಲಕ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಅವರಿಗೆ ಗೊತ್ತಿದೆ. ಪ್ರಜಾಪ್ರಭುತ್ವದ ಬಗ್ಗೆ, ಸಾರ್ವಜನಿಕರ ಬಗ್ಗೆ ಅಥವಾ ದಲಿತರ ಹಕ್ಕುಗಳ ಬಗ್ಗೆ ಅವರಿಗೆ ಗೌರವವಿಲ್ಲ. ಮೋದಿ ಜಿ, ನಿಮ್ಮ ಮೌನವು ಬಹಳಷ್ಟು ಹೇಳುತ್ತದೆ. ದಲಿತರು ಮತ್ತು ವಂಚಿತರ ಹಕ್ಕುಗಳನ್ನು ಕಸಿದುಕೊಳ್ಳುವ ಲೂಟಿಕೋರರೇ ನಿಮ್ಮ ಸರ್ಕಾರಕ್ಕೆ ಬೆಂಬಲವಾಗಿ ನಿಂತಿರುವುದರಿಂದ ನೀವು ಈ ಕಾರಣಕ್ಕಾಗಿ ಮೌನವಾಗಿದ್ದೀರಾ?" ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಅಜಿತ್ ಪವಾರ್ ಅವರ ಎನ್‌ಸಿಪಿ ಬಣವು ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದ ಭಾಗವಾಗಿದೆ. ಈ ಹಿಂದೆ 70,000 ಕೋಟಿ ರೂ. ನೀರಾವರಿ ಹಗರಣದಲ್ಲಿ ಅಜಿತ್ ಪವಾರ್ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಅವರು ಬಿಜೆಪಿಯೊಂದಿಗೆ ಕೈಜೋಡಿಸಿದ ನಂತರ ತನಿಖೆ ಸ್ಥಗಿತಗೊಳಿಸಲಾಗಿದೆ.
Advertisement