

ಉತ್ತರ ಪ್ರದೇಶದ ಹಮೀರ್‌ಪುರದಿಂದ ತೀವ್ರ ಕಳಕಳಿ ಮತ್ತು ಆಘಾತಕಾರಿ ಘಟನೆ ನಡೆದಿದೆ. ಸೆಕ್ಸ್‌ಗೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ 40 ವರ್ಷದ ಮಹಿಳೆಯ ಮೇಲೆ 14 ವರ್ಷದ ಬಾಲಕ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ನವೆಂಬರ್ 3 ರಂದು ನಡೆದಿತ್ತು. ಒಂಬತ್ತನೇ ತರಗತಿಯ ಬಾಲಕನೊಬ್ಬ ಹೊಲದಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದ್ದನು. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದ ಆಕ್ರೋಶಗೊಂಡ ಬಾಲಕ ಕುಡುಗೋಲು ಮತ್ತು ಕೋಲಿನಿಂದ ಆಕೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು.
ಹೊಲದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಕಂಡ ತಕ್ಷಣ ಗ್ರಾಮಸ್ಥರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಆಕೆಯನ್ನು ಚಂಡೀಗಢದ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಬುಧವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳದಿಂದ ಪೊಲೀಸರು ಕುಡುಗೋಲು, ಕೋಲು, ಮುರಿದ ಮಾಪಕ ಮತ್ತು ಪೆನ್ನಿನ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಅಪ್ರಾಪ್ತ ಬಾಲಕ ಹಲ್ಲೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಹೀಗಾಗಿ ಆತನನ್ನು ಬಾಲಗೃಹದಲ್ಲಿ ಇರಿಸಲಾಗಿದೆ. ತನ್ನ 17 ವರ್ಷದ ಅಂಗವಿಕಲ ಮಗನನ್ನು ಮಹಿಳೆ ಬೆಳೆಸುತ್ತಿದ್ದು ಆಕೆಯೆ ಕುಟುಂಬದ ಏಕೈಕ ಆಧಾರವಾಗಿದ್ದಳು. ಹಮೀರ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಉಪಾಧ್ಯಾಯ ಮಾತನಾಡಿ, ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Advertisement