

ಮುಂಬೈ: ಪೂರ್ವ ರಾಜ್ಯದ ಜನರು ಬದಲಾವಣೆಯನ್ನು ಬಯಸುತ್ತಿರುವುದರಿಂದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸೋತರೂ ಆಶ್ಚರ್ಯವೇನಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ-ಶರದ್‌ಚಂದ್ರ ಪವಾರ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಬಿಹಾರ ದೇಶದ ಉಳಿದ ಭಾಗಗಳಿಗಿಂತ ಭಿನ್ನವಾದ ರಾಜ್ಯವಾಗಿದ್ದು, ದೇಶದ ರಾಜಕೀಯದಲ್ಲಿ ಕೆಲವು ನಿರ್ಣಾಯಕ ಕ್ಷಣಗಳಿಗೆ ಸಾಕ್ಷಿಯಾಗಿದೆ ಎಂದರು.
ಹಿರಿಯ ರಾಜಕಾರಣಿಯಾಗಿರುವ ಶರದ್ ಪವಾರ್ , ಬಿಹಾರದಲ್ಲಿ ಪ್ರಚಾರ ಮಾಡಿಲ್ಲವಾದರೂ ರಾಜ್ಯದಲ್ಲಿನ ತಮ್ಮ ಸಂಪರ್ಕಗಳಿಂದ ಪಡೆದ ಪ್ರತಿಕ್ರಿಯೆಗಳ ಪ್ರಕಾರ, ಎನ್‌ಡಿಎ ಅಧಿಕಾರ ಕಳೆದುಕೊಂಡರೂ ಆಶ್ಚರ್ಯವೇನಿಲ್ಲ. ಬಿಹಾರದ ಜನರು ಬದಲಾವಣೆ ಬಯಸುತ್ತಾರೆ ಎಂದು ಅವರು ಹೇಳಿದರು.
"ಇದು ರಾಜಕೀಯ ಅರಿವು ಹೊಂದಿರುವ ಬಡ ರಾಜ್ಯ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಚಂಪಾರಣ್‌ನಲ್ಲಿ ಮಹಾತ್ಮ ಗಾಂಧಿಯವರ ಹೋರಾಟ, ತುರ್ತು ಪರಿಸ್ಥಿತಿಯ ವಿರುದ್ಧ ಜಯಪ್ರಕಾಶ್ ನಾರಾಯಣ್ ಅವರ ಆಂದೋಲನ ಮತ್ತು ಇಂದಿರಾ ಗಾಂಧಿಯವರು ವಿರೋಧ ಪಕ್ಷದಲ್ಲಿದ್ದಾಗ ಆನೆಯ ಮೇಲೆ ಸವಾರಿ ಮಾಡಿದ ಬೆಲ್ಚಿಗೆ ಭೇಟಿ ನೀಡಿದದ್ದು, ಭಾರತೀಯ ರಾಜಕೀಯದಲ್ಲಿ ನಿರ್ಣಾಯಕ ಕ್ಷಣಗಳಾಗಿವೆ ಎಂದು ಅವರು ಹೇಳಿದರು.
ಮೊನ್ನೆ ನಡೆದ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ ದಾಖಲೆಯ ಶೇ. 65. 08 ರಷ್ಟು ಮತದಾನವಾಗಿದೆ.
Advertisement