

ಪಾಟ್ನಾ: ಬಿಹಾರ ಚುನಾವಣೆಯ ಮೊದಲ ಹಂತದಲ್ಲಿ 'ದಾಖಲೆಯ ಮತದಾನ'ದ ಮೂಲಕ ಜನರು ತಾವು 'ಫಲಿತಾಂಶ'ವನ್ನು ಬಯಸುತ್ತಾರೆಯೇ ಹೊರತು 'ಜುಮ್ಲಾ'ವನ್ನು (ಪೊಳ್ಳು ಭಾಷಣ) ಅಲ್ಲ ಎಂಬ ನೇರ ಸಂದೇಶವನ್ನು ನೀಡಿದ್ದಾರೆ ಎಂದು ಆರ್‌ಜೆಡಿ ನಾಯಕ ಮತ್ತು ಇಂಡಿಯಾ ಬಣದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಮಂಗಳವಾರ ಹೇಳಿದ್ದಾರೆ.
ಎರಡನೇ ಹಂತದ ಮತದಾನದ ದಿನದಂದು ಆರ್‌ಜೆಡಿ ನಾಯಕ ತಮ್ಮ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, 'ಎನ್‌ಡಿಎ ಸರ್ಕಾರದಿಂದ ಜನರು ಕೇವಲ ಭರವಸೆಗಳು, ಘೋಷಣೆಗಳು, ಪೊಳ್ಳು ಮತ್ತು ಖಾಲಿ ಆಶ್ವಾಸನೆಗಳನ್ನು ಪಡೆದಿದ್ದಾರೆ. ಬಿಹಾರದ ಜನರು ಇನ್ನು ಮುಂದೆ ಇವುಗಳನ್ನು ಒಂದು ಕ್ಷಣವೂ ಸಹಿಸಲಾರರು' ಎಂದಿದ್ದಾರೆ.
'ಕಳೆದ ಕೆಲವು ವರ್ಷಗಳಿಂದ ಇಂಡಿಯಾ ಬಣವು ಬಿಹಾರಕ್ಕೆ ಅಭಿವೃದ್ಧಿ ನೀತಿಯನ್ನು ವಿನ್ಯಾಸಗೊಳಿಸಲು ಶ್ರಮಿಸಿದೆ. ಇದು 'ಸ್ವಭಾವತಃ ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲ ವರ್ಗ, ಜಾತಿ, ಧರ್ಮ ಮತ್ತು ಸಮುದಾಯಗಳಿಗೆ ಪೂರೈಸುವ' ನೀತಿಯಾಗಿದೆ. ಜನರು ಎನ್‌ಡಿಎಯ ಕೆಟ್ಟ ತಂತ್ರಗಳನ್ನು ರದ್ದುಗೊಳಿಸಿದ್ದಾರೆ' ಎಂದು ಅವರು ಹೇಳಿದರು.
'ನನ್ನ ಕನಸು ನಿಮ್ಮಂತೆಯೇ ಇದೆ. ನಿಮ್ಮ ನೋವು ನನ್ನಂತೆಯೇ ಇದೆ. ನಮ್ಮ ಗುರಿಗಳು ಒಂದೇ ಆಗಿವೆ, ಬಿಹಾರದ ಹೊರಗಿನ ಯಾರಿಗೂ ಇದು ನಿಜವಾಗಿಯೂ ಅರ್ಥವಾಗುವುದಿಲ್ಲ. ಈಗಾಗಲೇ ತುಂಬಾ ತಡವಾಗಿದೆ. ಕಳೆದ 20 ವರ್ಷಗಳಲ್ಲಿ, ನಾವು ನಿಜವಾದ ಅಭಿವೃದ್ಧಿಯನ್ನು ಸಾಧಿಸುವಲ್ಲಿ ವಿಫಲರಾಗಿದ್ದೇವೆ. ಸರ್ಕಾರವು ಯುವಕರಿಗೆ ಉದ್ಯೋಗಗಳನ್ನು ಒದಗಿಸಲು, ಅಪರಾಧಗಳನ್ನು ಕಡಿಮೆ ಮಾಡಲು, ಗುಣಮಟ್ಟದ ಶಿಕ್ಷಣ ನೀಡಲು ಅಥವಾ ಪರಿಣಾಮಕಾರಿ ಆರೋಗ್ಯ ಸೇವೆಗಾಗಿ ಉತ್ತಮ ಆಸ್ಪತ್ರೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ರೈತರು ಪ್ರವಾಹದಿಂದ ಬಳಲುತ್ತಿದ್ದಾರೆ, ವ್ಯಾಪಾರಿಗಳು ನಷ್ಟವನ್ನು ಎದುರಿಸುತ್ತಿದ್ದಾರೆ ಮತ್ತು ಜನರು ಇನ್ನೂ ಹಣದುಬ್ಬರದಿಂದ ಸಂಕಷ್ಟಕ್ಕೀಡಾಗಿದ್ದಾರೆ' ಎಂದು ಅವರು ಹೇಳಿದರು.
Advertisement