

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆ ಬಳಿಕ ನಡೆದ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ತನಿಖೆಯಿಂದ ರಕ್ಕಸರು ರೂಪಿಸಿದ್ದ ಸಂಚುಗಳು ಒಂದೊಂದಾಗಿ ಬಹಿರಂಗಗೊಳ್ಳುತ್ತಿವೆ.
ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಪೋಟ ನಡೆಸಿದ್ದ ಉಗ್ರರು, ಅಸಲಿಗೆ 26/11 ಮುಂಬೈ ದಾಳಿಯ ಮಾದರಿಯಲ್ಲಿಯೇ ದೆಹಲಿ ನಗರದಾದ್ಯಂತ ಬಾಂಬ್ ಸ್ಪೋಟಿಸುವ ಯೋಜನೆಯನ್ನು ಹೊಂದಿದ್ದರು ಎಂಬ ವಿಚಾರ ಇದೀಗ ಬಯಲಾಗಿದೆ.
26/11 ಮುಂಬೈ ದಾಳಿಯ ಮಾದರಿಯಲ್ಲಿ ದೆಹಲಿಯಲ್ಲಿ ಸರಣಿ ದಾಳಿ ನಡೆಸಲು ಉದ್ದೇಶಿಸಿದ್ದ ಉಗ್ರರು, ಕೆಂಪು ಕೋಟೆ, ಇಂಡಿಯಾ ಗೇಟ್, ಕಾನ್ಸ್ಟಿಟ್ಯೂಷನ್ ಕ್ಲಬ್ ಮತ್ತು ಗೌರಿ ಶಂಕರ್ ದೇವಾಲಯ ಸೇರಿದಂತೆ, ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ನವೆಂಬರ್ 26, 2008ರಂದು ನಡೆದ ಮುಂಬೈ ದಾಳಿ ವೇಳೆ ಉಗ್ರರು, ತಾಜ್ ಹೋಟೆಲ್, ಒಬೆರಾಯ್ ಹೋಟೆಲ್, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಲಿಯೋಪೋಲ್ಡ್ ಆಸ್ಪತ್ರೆ ಸೇರಿದಂತೆ, ಒಟ್ಟು 12 ಸ್ಥಳಗಳಲ್ಲಿ ಏಕಕಾಲದಲ್ಲಿ ಗುಂಡಿನ ದಾಳಿ ಮತ್ತು ಬಾಂಬ್ ದಾಳಿಗಳು ನಡೆದಿದ್ದವು.
ದೆಹಲಿಯಲ್ಲೂ ಇದೇ ಮಾದರಿಯನ್ನು ಅನುಸರಿಸಲು ಬಯಸಿದ್ದ ಉಗ್ರರು, ಅಂತಿಮ ಕ್ಷಣದಲ್ಲಿ ಈ ಯೋಜನೆಯಿಂದ ಹಿಂದೆ ಸರಿದು ಕೇವಲ ಒಂದೇ ಸ್ಥಳದಲ್ಲಿ ದಾಳಿ ನಡೆಸಿದ್ಧಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಸರಣಿ ದಾಳಿಗಳಿಗಾಗಿ ಸುಮಾರು 200 IEDಗಳನ್ನು ಸಂಗ್ರಹಿಸುವ ಪ್ರಯತ್ನ ಕೂಡ ನಡೆದಿತ್ತು ಎಂಬುದು ನಿಜಕ್ಕೂ ಆಘಾತಕಾರಿ ಅಂಶವಾಗಿದೆ.
ಸುಮಾರು 8 ಮಂದಿ ಉಗ್ರರು ನಾಲ್ಕು ಸ್ಥಳಗಳಲ್ಲಿ ಸರಣಿ ಸ್ಫೋಟ ನಡೆಸಲು ಯೋಜನೆ ರೂಪಿಸಿದ್ದರು. ತಲಾ 2 ಎರಡು ಗುಂಪುಗಳಾಗಿ ನಾಲ್ಕು ನಗರಗಳಿಗೆ ತೆರಳಿ ದಾಳಿಗೆ ಸಂಚು ರೂಪಿಸಿದ್ದರು ಎಂದು ತನಿಖಾ ಸಂಸ್ಥೆಯ ಮೂಲಗಳು ಮಾಹಿತಿ ನೀಡಿವೆ.
ಈ ಯೋಜನೆಯು ಜನವರಿ 2025ರಿಂದಲೇ ರೂಪುಗೊಂಡಿತ್ತು ಎನ್ನಲಾಗಿದ್ದು, ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಸಂಘಟನೆಯು ಈ ಸಂಚಿನ ಹಿಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಗಣರಾಜ್ಯೋತ್ಸವ ಉಗ್ರರ ಗುರಿಯಾಗಿತ್ತು..!
ಕಳೆದ ಜ.26 ಗಣರಾಜ್ಯೋತ್ಸವದಂದೇ ಕೆಂಪು ಕೋಟೆಯ ಬಳಿ ಸ್ಫೋಟಕ್ಕೆ ಉಗ್ರರು ಸಂಚು ರೂಪಿಸಿದ್ದರು. ಇದರ ಭಾಗವಾಗಿ ಡಾ. ಮುಜಮ್ಮಿಲ್ ಮತ್ತು ಉಮರ್ ನಬಿ ಇಬ್ಬರೂ ಕಳೆದ ಜನವರಿ ತಿಂಗಳ ಮೊದಲ ವಾರದಲ್ಲಿ ಕೆಂಪುಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹಲವು ಭಾರೀ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದು ಆ ಪ್ರದೇಶದಲ್ಲಿನ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ಮತ್ತು ಜನಸಂದಣಿ ಹೆಚ್ಚಿರುವ ಸಮಯದ ಬಗ್ಗೆ ತಿಳಿಯುವ ಕೆಲಸವಾಗಿತ್ತು. ಇಬ್ಬರ ಮೊಬೈಲ್ ಡಾಟಾ ಮತ್ತು ಕೆಂಪುಕೋಟೆ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿಗಳ ಅಧ್ಯಯನದಲ್ಲಿ ಕೆಂಪುಕೋಟೆ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಅವರ ಚಲನವಲನ ಕಂಡುಬಂದಿದೆ. ಅಲ್ಲದೆ, ಪ್ರಾಥಮಿಕ ವಿಚಾರಣೆ ವೇಳೆ ಸ್ವತಃ ಮುಜಮ್ಮಿಲ್ ಕೂಡಾ ಜ.26ರ ಸ್ಫೋಟದ ಸಂಚಿನ ಬಗ್ಗೆ ಬಾಯಿಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಆದರೆ, ಜ.26ರ ಕಾರ್ಯಕ್ರಮಕ್ಕೆ ತಿಂಗಳ ಮುನ್ನವೇ ಅದರ ಸುತ್ತಮುತ್ತಲೂ ಪೊಲೀಸರು ಭಾರೀ ಭದ್ರತೆ ವಹಿಸುವ ಕಾರಣ ಅಲ್ಲಿ ಸ್ಫೋಟಕ್ಕೆ ಅವಕಾಶ ಕಡಿಮೆ ಎನ್ನುವ ಕಾರಣಕ್ಕೆ ಉಗ್ರರು ಪ್ಲ್ಯಾನ್ ಕೈಬಿಟ್ಟಿದ್ದರು. ಬಳಿಕ ದೀಪಾವಳಿ ವೇಳೆ ಹೆಚ್ಚು ಜನಸಂದಣಿ ಇರುವ ಮಾರುಕಟ್ಟೆಗಳ ಬಳಿ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು. ಆದರೆ, ಆ ಯೋಜನೆ ಕೂಡಾ ನಾನಾ ಕಾರಣಗಳಿಂದ ಕಾರ್ಯರೂಪಕ್ಕೆ ಬಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ರಜೆ ಕಾರಣ ತಪ್ಪಿದ ದೊಡ್ಡ ಅನಾಹುತ
ಈ ನಡುವೆ ಸೋಮವಾರ ಕೆಂಪುಕೋಟೆ ಸಿಗ್ನಲ್ ಬಳಿ ಸಂಭವಿಸಿದ ಸ್ಫೋಟ, ವಾಸ್ತವವಾಗಿ ಕೆಂಪುಕೋಟೆಯ ವಾಹನ ಪಾರ್ಕಿಂಗ್ ಜಾಗದಲ್ಲಿ ನಡೆಯಬೇಕಿತ್ತು. ಆದರೆ, ಸೋಮವಾರ ಕೆಂಪುಕೋಟೆಗೆ ರಜೆ ಇದ್ದ ಕಾರಣ ಪಾರ್ಕಿಂಗ್ ಜಾಗದಲ್ಲಿ ಹೆಚ್ಚು ವಾಹನಗಳು ಹಾಗೂ ಜನರು ಇರದೇ ಇದ್ದಿದ್ದು, ಉಗ್ರ ಉಮರ್ ಕನಸು ಭಗ್ನವಾಗುತಂತೆ ಮಾಡಿತ್ತು ಎಂಬ ವಿಚಾರ ತನಿಖೆಯಿಂದ ತಿಳಿದುಬಂದಿದೆ.
ಏತನ್ಮಧ್ಯೆ ಫರೀದಾಬಾದ್‌ನಲ್ಲಿನ ತನ್ನ ಸ್ನೇಹಿತ ವೈದ್ಯರ ಬಂಧನದ ಬಳಿಕ ಉಮರ್ ನಬಿ ಹತಾಶನಾಗಿದ್ದ. ಹೀಗಾಗಿ ಸ್ಫೋಟಕವಿದ್ದ ಐ20 ಕಾರಿನಲ್ಲಿ ದೆಹಲಿಗೆ ಬಂದು ಕೆಂಪುಕೋಟೆ ಪಾರ್ಕಿಂಗ್ ತಾಣದಲ್ಲಿ ಸ್ಫೋಟಿಸಲು ಸಂಚು ರೂಪಿಸಿದ್ದ.ಏಕೆಂದರೆ ಯಾವಾಗಲೂ ಪಾರ್ಕಿಂಗ್ ತಾಣ ಜನರು ಹಾಗೂ ವಾಹನಗಳಿಂದ ಗಿಜಿಗಿಜಿ ಎನ್ನುತ್ತದೆ ಎಂದು ಆತನಿಗೆ ಗೊತ್ತಿತ್ತು. ಯೋಜನೆಯಂತೆ ಸೋಮವಾರ ಮಧ್ಯಾಹ್ನ 3.19ಕ್ಕೆ ಅಲ್ಲಿ ಕಾರು ಸಮೇತ ಆತ ಬಂದಿದ್ದ.
ಆದರೆ,ಪಾರ್ಕಿಂಗ್ ಜಾಗ ಗಿಜಿಗಿಜಿ ಎನ್ನದೇ ಖಾಲಿ ಇತ್ತು. ಇದು ಆತನಿಗೆ ಅಚ್ಚರಿ ಮೂಡಿಸಿತ್ತು. ಬಳಿಕ ಸೋಮವಾರ ಕೆಂಪುಕೋಟೆಗೆ ರಜೆ ಇರುವ ವಿಷಯ ತಿಳಿದಿದೆ. ಹೀಗಾಗಿ 3 ಗಂಟೆ ಕಾದ ಉಗ್ರ ಡಾ। ನಬಿ, ಈ ವೇಳೆ ಮಸೀದಿಯಲ್ಲಿ ಸುದೀರ್ಘ ಪ್ರಾರ್ಥನೆ ಸಲ್ಲಿಸಿ, ಅಲ್ಲಿಂದ ಹೊರಟಿದ್ದಾನೆ. ಬಳಿಕ ಆಕ್ರೋಶದಲ್ಲಿ ಕೆಂಪುಕೋಟೆ ಸಮೀಪದ ರಸ್ತೆ ಸಿಗ್ನಲ್ ಬಳಿ ಸ್ಫೋಟ ನಡೆಸಿರಬಹುದು ಎಂದು ಹೇಳಲಾಗುತ್ತಿದೆ.
Advertisement