

ಲಖನೌ: ವಿವಾಹಿತ ಮಾಜಿ ಗೆಳೆಯನೊಬ್ಬ ತನ್ನ ಮಾಜಿ ಗೆಳತಿಯನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದಾಗ, ಆಕೆ ಅವನ ನಾಲಿಗೆಯನ್ನೇ ಕಚ್ಚಿ ಕಿತ್ತೆಸೆದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಮತ್ತು ಆಕೆಯ ಮಾಜಿ ಗೆಳೆಯ ಇಬ್ಬರೂ ವಿವಾಹಿತರಾಗಿದ್ದು, ಆಕೆಯ ಮದುವೆ ಸಹಿಸದ ಮಾಜಿ ಗೆಳೆಯ ಆಕೆಯನ್ನು ಹಿಂಬಾಲಿಸಿ ಬಲವಂತವಾಗಿ ಚುಂಬಿಸಲು ಯತ್ನಿದ್ದಾನೆ.
ಈ ವೇಳೆ ಮಹಿಳೆ ಆತನ ನಾಲಗೆಯನ್ನು ಕಚ್ಚಿ ಕತ್ತರಿಸಿ ಹಾಕಿದ್ದಾಳೆ. ಆತನ ನಾಲಗೆ ಕೆಳಗೆ ಬಿದ್ದು ಬಾಯಿಂದ ರಕ್ತಸ್ರಾವವಾಗುತ್ತಲೇ ಸ್ಥಳೀಯರು ದೌಡಾಯಿಸಿ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಗೆ ಕಳುಹಿಸಿದರು ಎನ್ನಲಾಗಿದೆ.
ಏನಿದು ಪ್ರಕರಣ?
ಉತ್ತರ ಪ್ರದೇಶದ ಕಾನ್ಪುರದ ದರಿಯಾಪುರ ಗ್ರಾಮದ ನಿವಾಸಿ 35 ವರ್ಷದ ವಿವಾಹಿತ ವ್ಯಕ್ತಿ ಚಂಪಿ ಎಂಬಾತ ಅದೇ ಗ್ರಾಮದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇದನ್ನು ಮನಗಂಡ ಆಕೆಯ ಪೋಷಕರು ಆಕೆಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ್ದರು. ಇದಾದ ಬಳಿಕ ಆರೋಪಿ ಚಂಪಿ ಆಗಾಗ ಮಹಿಳೆಯನ್ನು ಭೇಟಿಯಾಗುತ್ತಿದ್ದ. ಅಲ್ಲದೆ ಆಕೆಯನ್ನು ತನ್ನೊಂದಿಗೆ ಬರುವಂತೆ ಮನವೊಲಿಸಲು ಯತ್ನಿಸುತ್ತಿದ್ದ.
ಈಗ್ಗೆ ಸೋಮವಾರ ಮಧ್ಯಾಹ್ನ, ಮಹಿಳೆ ಒಲೆಗಾಗಿ ಜೇಡಿಮಣ್ಣನ್ನು ಸಂಗ್ರಹಿಸಲು ಸಮೀಪದ ಕೆರೆಗೆ ಹೋಗಿದ್ದಳು. ಈ ವೇಳೆ ಆಕೆ ಒಂಟಿಯಾಗಿರುವುದನ್ನು ಕಂಡ ಆರೋಪಿ ಚಂಪಿ, ಆಕೆಯನ್ನು ಭೇಟಿ ಮಾಡಿ ಮಾತನಾಡಿಸಲು ಯತ್ನಿಸಿದ್ದಾನೆ.
ಆದರೆ ಆಕೆ ಒಪ್ಪದಿದ್ದಾಗ ಆತ ಅವಳನ್ನು ಹಿಡಿದು ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಆಕೆ ಹಿಂದಕ್ಕೆ ಸರಿದಾಗ ಆಕೆಯನ್ನು ಬಲವಂತಾಗಿ ತಬ್ಬಿ ಹಿಡಿದ ಆತ ಚುಂಬಿಸಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಆತನಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೇ ಆತನ ನಾಲಿಗೆಯನ್ನೇ ತನ್ನ ಹಲ್ಲುಗಳಿಂದ ಕತ್ತರಿಸಿಹಾಕಿದ್ದಾಳೆ.
ಈ ವೇಳೆ ಚಂಪಿ ಜೋರಾಗಿ ಕೂಗಾಡಿದ್ದು, ಕೂಗಾಟ ಕೇಳಿದ ಗ್ರಾಮಸ್ಥರು ದೌಡಾಯಿಸಿ ರಕ್ತದ ಮಡುವಿನಲ್ಲಿದ್ದ ಚಂಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಪ ಪೊಲೀಸ್ ಆಯುಕ್ತ ದಿನೇಶ್ ತ್ರಿಪಾಠಿ ಘಟನೆಯನ್ನು ದೃಢಪಡಿಸಿದ್ದು, ಪ್ರಕರಣ ದಾಖಲಿಸಲಾಗಿದೆ ಮತ್ತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
Advertisement