

ಕೊಚ್ಚಿ: ಕೇರಳದ ಆಲಪ್ಪುಳದ ಥಂಪೋಲಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ ವರ ತಾಳಿ ಕಟ್ಟಿರುವ ಘಟನೆ ನಡೆದಿದೆ.
ಹೌದು. ಮದುವೆಗಾಗಿ ದೇವಸ್ಥಾನಕ್ಕೆ ತೆರಳುವ ಮುನ್ನ ಮೇಕಪ್ ಮಾಡಿಸಿಕೊಳ್ಳಲು ಇಂದು ಬೆಳಗ್ಗೆಯೇ ಮನೆಯಿಂದ ತೆರಳಿದ್ದ ವಧು ಅವನಿ ಅನಿರೀಕ್ಷಿತ ಅಪಘಾತದಿಂದ ಗಾಯಗೊಂಡಿದ್ದಾರೆ. ಆರಂಭದಲ್ಲಿ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಧಾವಿಸಿದ ನಂತರ ಅವರನ್ನು ವಿಶೇಷ ಆರೈಕೆಗಾಗಿ ಕೊಚ್ಚಿಯ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬೆನ್ನುಮೂಳೆಯ ಗಾಯದಿಂದ ತೀವ್ರವಾದ ನೋವಿನ ಹೊರತಾಗಿಯೂ, ಅವನಿ ಮತ್ತು ವರ ಶರೋನ್ ಅವರ ದೃಢಸಂಕಲ್ಪ ಕೊನೆಗೂ ನೇರವೇರಿದೆ. ಆಸ್ಪತ್ರೆಯೊಳಗೆ ವಿವಾಹ ನಡೆದಿದೆ. ಅವನಿ ತುರ್ತು ವಾರ್ಡ್‌ನಲ್ಲಿ ಹಾಸಿಗೆಯ ಮೇಲೆ ಮಲಗಿರುವಂತೆಯೇ ಆಕೆಯ ಕುತ್ತಿಗೆಗೆ ಶರೋನ್ ತಾಳಿ ಕಟ್ಟಿದ್ದಾರೆ. ಕುಟುಂಬ ಸದಸ್ಯರು ಇದಕ್ಕೆ ಸಾಕ್ಷಿಯಾಗಿದ್ದು, ಅವರ ವಿವಾಹ ಪ್ರತಿಜ್ಞೆಯನ್ನು ಪೂರೈಸಿದ್ದಾರೆ.
ಅವನಿ ತುರ್ತು ವಿಭಾಗದಲ್ಲಿ ದಾಖಲಾಗಿದ್ದು, ಮಧ್ಯಾಹ್ನ 12:15 ರಿಂದ 12:30 ರ ನಡುವೆ ಮದುವೆ ನಡೆದಿದೆ. ಆಸ್ಪತ್ರೆಯಲ್ಲಿಯೇ ಸಮಾರಂಭ ನಡೆಸಬೇಕೆಂದು ವರನ ಕುಟುಂಬ ಮನವಿ ಮೇರೆಗೆ ಇಲ್ಲಿಯೇ ಮದುವೆ ನಡೆಸಿದ್ದೇವೆ ಎಂದು ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. ಸಮಾರಂಭದ ನಂತರ, ಅವನಿಯನ್ನು ಐಸಿಯುಗೆ ಸ್ಥಳಾಂತರಿಸಲಾಯಿತು
. ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುಧೀಶ್ ಕರುಣಾಕರನ್ ಅವರ ಆರೈಕೆಯಲ್ಲಿ ಶನಿವಾರ ಅವನಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಮಧ್ಯೆ ಆಲಪ್ಪುಳದಲ್ಲಿರುವ ವಿವಾಹ ಸ್ಥಳಕ್ಕೆ ಆಗಮಿಸಿದ ಅತಿಥಿಗಳಿಗೆ ಮೊದಲೇ ಯೋಜಿಸಿದಂತೆ ಭರ್ಜರಿ ಊಟ ನೀಡಲಾಯಿತು.
Advertisement