
ಕರೂರು: ತಮಿಳುನಾಡಿನ ಕರೂರಿನಲ್ಲಿ ಇತ್ತೀಚಿಗೆ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಮಾನಹಾನಿಕರ ವಿಷಯವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಖ್ಯಾತ ಬಲಪಂಥೀಯ ಯೂಟ್ಯೂಬರ್ ಮರಿಧಾಸ್ ಅವರನ್ನು ಸೈಬರ್ ಕ್ರೈಮ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಸೆಪ್ಟೆಂಬರ್ 27 ರ ಘಟನೆಯ ತನಿಖೆಗಾಗಿ ಐಪಿಎಸ್ ಅಧಿಕಾರಿ ಆಸ್ರಾ ಗಾರ್ಗ್, ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸುವಂತೆ ಮದ್ರಾಸ್ ಹೈಕೋರ್ಟ್ ಅಕ್ಟೋಬರ್ 3 ರಂದು ಆದೇಶಿಸಿದ ನಂತರ ಈ ಬಂಧನ ನಡೆದಿದೆ.
ನಟ ವಿಜಯ್ ಕರೂರಿನಲ್ಲಿ ಟಿವಿಕೆಯ ರ‍್ಯಾಲಿ ನಡೆಸುತ್ತಿದ್ದಾಗ ಸಂಭವಿಸಿದ ದುರಂತದಲ್ಲಿ 41 ಜನರು ಸಾವನ್ನಪ್ಪಿದರು ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಮರಿಧಾಸ್ ಅವರನ್ನು ಅವರ ನಿವಾಸದಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ 'ಎಕ್ಸ್' ನಲ್ಲಿ ಮಾಡಿದ ಪೋಸ್ಟ್ ಬಗ್ಗೆ ಪ್ರಶ್ನಿಸಿದ್ದಾರೆ. ನಂತರ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಹಾಜರಾಗುವಂತೆ ನಿರ್ದೇಶನ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತದನಂತರ ಪೋಸ್ಟ್ ಮಾಡಿರುವ ಮಾರಿಧಾಸ್ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಕಾಲ್ತುಳಿತದ ಬಗ್ಗೆ ತಾನು ಯಾವುದೇ ಸುಳ್ಳು ಹೇಳಿಕೆಗಳನ್ನು ನೀಡಿಲ್ಲ ಎಂದು ಅವರು ಹೇಳಿದ್ದಾರೆ. ವಿಜಯ್ ವಿರುದ್ಧದ ಡಿಎಂಕೆ ಸರ್ಕಾರದ ಕ್ರಮವು ನಟ-ರಾಜಕಾರಣಿಗೆ ಮಾಡಿದ "ಅನ್ಯಾಯ" ಎಂದು ವಿವರಿಸಿದ ಕಾರಣದಿಂದ ತನನ್ನು ಬಂಧಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
Advertisement