
ವಿಶಾಖಪಟ್ಟಣಂ: ಜಾಗತಿಕ ಟೆಕ್ ದೈತ್ಯ ಗೂಗಲ್ ಸಂಸ್ಥೆಯ 15 ಬಿಲಿಯನ್ ಡಾಲರ್ ಹೂಡಿಕೆಯ AI ಡೇಟಾ ಸೆಂಟರ್ ಯೋಜನೆ ಆಂಧ್ರಪ್ರದೇಶ ರಾಜ್ಯ ಪಾಲಾದ ಬೆನ್ನಲ್ಲೇ ಅದರ ಐಟಿ ಸಚಿವ ನಾರಾ ಲೋಕೇಶ್ ಮತ್ತೆ ಕರ್ನಾಟಕದ ವಿರುದ್ಧ ವಂಗ್ಯ ಮಾಡಿದ್ದಾರೆ.
ಹೌದು.. ಹೂಡಿಕೆ ವಿಚಾರವಾಗಿ ಸದಾ ಕಾಲ ಕರ್ನಾಟಕದೊಂದಿಗೆ ಪೈಪೋಟಿಗೆ ನಿಲ್ಲುವ ಆಂಧ್ರ ಪ್ರದೇಶ ಈ ಬಾರಿಯೂ ಉದ್ಯಮಿಗಳನ್ನು ಆಕರ್ಷಿಸಲು ನಾನಾ ಕಸರತ್ತು ಮಾಡುತ್ತಿದೆ. ಪ್ರಮುಖವಾಗಿ ಆಂದ್ರ ಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಕರ್ನಾಟಕದಲ್ಲಿರುವ ಉದ್ಯಮಿಗಳನ್ನು ತಮ್ಮ ರಾಜ್ಯಕ್ಕೆ ಆಕರ್ಷಿಸಲು ಹರಸಾಹಸ ಮಾಡುತ್ತಿದ್ದಾರೆ.
ಇದೇ ವಿಚಾರವಾಗಿ ಕರ್ನಾಟಕದ ಸರ್ಕಾರ ಮತ್ತು ನಾರಾ ಲೋಕೇಶ್ ನಡುವೆ ವಾಕ್ಸಮರಗಳು ನಡೆಯುತ್ತಿದೆ. ಇದೀಗ ಇದೇ ವಿಚಾರವಾಗಿ ಸಚಿವ ನಾರಾ ಲೋಕೇಶ್ ಕೂಡ ಕರ್ನಾಟಕ ಕುರಿತು ವ್ಯಂಗ್ಯಾತ್ಮಕ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ನಲ್ಲೇನಿದೆ?
ಹೂಡಿಕೆ ಆಕರ್ಷಣೆ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನಾರಾ ಲೋಕೇಶ್, 'ಆಂಧ್ರದ ಆಹಾರ ಖಾರವಾಗಿದೆ ಎಂದು ಕೆಲವರು ಹೇಳುತ್ತಾರೆ. ನಮ್ಮ ಕೆಲವು ಹೂಡಿಕೆಗಳು ಕೂಡ ಖಾರವಾಗಿವೆ ಎಂದು ತೋರುತ್ತದೆ. ಕೆಲವು ನೆರೆಹೊರೆಯವರು ಈಗಾಗಲೇ ಖಾರದಿಂದ ಬೇಯುತ್ತಿದ್ದಾರೆ! ಅವರ ಹೊಟ್ಟೆ ಉರಿಯುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಕರ್ನಾಟಕಕ್ಕೆ ಉರಿಯ ಅನುಭವವಾಗುತ್ತಿದೆ ಎಂದು ನಾರಾ ಲೋಕೇಶ್ ಕಟುವಾಗಿ ಹೇಳಿದ್ದಾರೆ.
ಕರ್ನಾಟಕದ ಮೂಲಭೂತ ಸೌಕರ್ಯ ಕುರಿತು ನಾರಾ ಲೋಕೇಶ್ ಮಾತು
ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿರುವ ರಸ್ತೆ ಗುಂಡಿ, ಮಳೆ ಪ್ರವಾಹ ಮತ್ತು ಕಸ ಸಂಗ್ರಹ ಮತ್ತು ನಿರ್ವಹಣೆ ಕುರಿತೂ ನಾರಾ ಲೋಕೇಶ್ ಮಾತನಾಡಿದ್ದು, ''ಅವರು (ಕರ್ನಾಟಕ ಸರ್ಕಾರ) ಅಸಮರ್ಥರಾಗಿದ್ದರೆ, ನಾನು ಏನು ಮಾಡಲು ಸಾಧ್ಯ? ಅವರ ಸ್ವಂತ ಕೈಗಾರಿಕೋದ್ಯಮಿಗಳು ಮೂಲಸೌಕರ್ಯ ಕೆಟ್ಟದಾಗಿದೆ ಎಂದು ಹೇಳುತ್ತಿದ್ದಾರೆ. ವಿದ್ಯುತ್ ಕಡಿತ, ಮೂಲಭೂತ ಸೌಕರ್ಯ ಕೊರತೆಗಳಂತಹ ಸಮಸ್ಯೆಗಳನ್ನು ಸರಿಪಡಿಸಬೇಕು" ಎಂದು ಅವರು ಹೇಳಿದ್ದರು.
ಅಲ್ಲದೆ ತಮ್ಮ ರಾಜ್ಯವು ಈಗಾಗಲೇ $120 ಬಿಲಿಯನ್ ಹೂಡಿಕೆಯನ್ನು ಆಕರ್ಷಿಸಿದ್ದು, ಆಂಧ್ರ ಪ್ರದೇಶದಲ್ಲಿನ ಸುಧಾರಣೆಗಳ ತ್ವರಿತ ವೇಗವು ಕರ್ನಾಟಕದೊಂದಿಗೆ ಸ್ಪರ್ಧಿಸುವಂತೆ ಮಾಡಿದೆ. ಆದಾಗ್ಯೂ, ಈ ವೇಗದಿಂದ ಚಿಂತಿತರಾಗಿರುವ ರಾಜ್ಯಗಳು ಪ್ರತಿಕ್ರಿಯಿಸಬೇಕಾಯಿತು. ಅದು ಅವರ ಸವಾಲು.. ಎಂದು ನಾರಾ ಲೋಕೇಶ್ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಉಲ್ಲೇಖಿಸದೇ ಹೇಳಿದರು.
'ರಾಜ್ಯವು ಹೂಡಿಕೆದಾರರಿಗೆ ಹೆಚ್ಚು ಆಕರ್ಷಕವಾಗಿದೆ. ನಮ್ಮ "ಡಬಲ್-ಎಂಜಿನ್" ಸರ್ಕಾರ, ತ್ವರಿತ ಕಾರ್ಮಿಕ ಸುಧಾರಣೆಗಳು ಮತ್ತು "ಬುಲೆಟ್ ಟ್ರೈನ್" ವೇಗದಲ್ಲಿ ಅಭಿವೃದ್ಧಿಯನ್ನು ಚಾಲನೆ ಮಾಡುವ ಬಲವಾದ ಕೇಂದ್ರ-ರಾಜ್ಯ ಸಮನ್ವಯಕ್ಕೆ ಮನ್ನಣೆ ನೀಡುತ್ತಿದೆ. ವಿಶಾಖಪಟ್ಟಣಂನಲ್ಲಿರುವ ಗೂಗಲ್‌ನ 15 ಬಿಲಿಯನ್ ಡಾಲರ್ ಡೇಟಾ ಸೆಂಟರ್ ಅಮೆರಿಕದ ಹೊರಗೆ ಭಾರತದ ಅತಿದೊಡ್ಡ ಯೋಜನೆಯಾಗಿದೆ ಮತ್ತು 1.8 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಕುರಿತು ಉದ್ಯಮಿಗಳ ಅಸಮಾಧಾನ
ಈ ಹಿಂದೆ ರಸ್ತೆ ಗುಂಡಿ ಮತ್ತು ಕಸ ನಿರ್ವಹಣೆ ಕುರಿತು ಬೆಂಗಳೂರು ಮೂಲದ ಹಲವು ಉದ್ಯಮಿಗಳು ಪ್ರಶ್ನೆ ಎತ್ತಿದ್ದರು. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ತಿರುಗೇಟು ನೀಡಿದ್ದರು. ಇದರ ನಡುವೆಯೇ ಗೂಗಲ್ ನ ಎಐ ಡೇಟಾ ಸೆಂಟರ್ ಯೋಜನೆ ಆಂಧ್ರ ಪ್ರದೇಶದ ಪಾಲಾಗಿದ್ದು ಕರ್ನಾಟಕಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
Advertisement