
ಚಂಡೀಗಢ: ಖ್ಯಾತ ಉದ್ಯಮಿ ಹಾಗೂ Mitskart ಸಂಸ್ಥೆಯ ಮಾಲೀಕ ಎಂಕೆ ಭಾಟಿಯಾ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ತಮ್ಮ ಸಂಸ್ಥೆಯ ಸಿಬ್ಬಂದಿಗೆ ಎಸ್ ಯುವಿ ಕಾರುಗಳ ಉಡುಗೊರೆ ನೀಡಿದ್ದಾರೆ.
ಹೌದು.. ಔಷಧ ಹಾಗೂ ಕಾಸ್ಮೆಟಿಕ್ ತಯಾರಿಕಾ ಕಂಪನಿ ಮಿಟ್ಸ್ ಕಾರ್ಟ್ ಮಾಲೀಕ ಎಂ.ಕೆ ಭಾಟಿಯಾ ತಮ್ಮ ಸಂಸ್ಥೆಯ ನೌಕರರಿಗೆ ಈ ಬಾರಿಯೂ ದುಬಾರಿ ಕಾರು ಗಿಫ್ಟ್ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಈ ಸಲ ದೀಪಾವಳಿ ಹಬ್ಬಕ್ಕೆ ಅವರು ತಮ್ಮ 12 ಜನ ನೌಕರರಿಗೆ ವಿವಿಧ ಬಣ್ಣದ ಟಾಟಾ ಪಂಚ್ (TATA Punch) ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದುವರೆಗೆ ಅವರು ತಮ್ಮ 51 ನೌಕರರಿಗೆ ಎಸ್ ಯುವಿ ಕಾರುಗಳ ಉಡುಗೊರೆ ನೀಡಿದ್ದಾರೆ.
ಉದ್ಯಮದೊಂದಿಗೆ ಸಾಮಾಜಿಕ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿರುವ ಭಾಟಿಯಾ ಹರಿಯಾಣದ ಪಂಚಕುಲಾದಲ್ಲಿ ಮಿಟ್ಸ್‌ಕಾರ್ಟ್ ಎಂಬ ಕಂಪನಿ ಹೊಂದಿದ್ದಾರೆ. ಪ್ರತಿ ಸಲ ದೀಪಾವಳಿ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆಗಳನ್ನು ನೀಡುವ ಪರಿಪಾಠ ಹೊಂದಿದ್ದಾರೆ.
ಅದೇ ರೀತಿ ಈ ಬಾರಿ ಸಂಸ್ಥೆಯ ಉದ್ಯೋಗಿಗಳನ್ನು ಕಾರ್ ಷೋರೂಮ್‌ಗೆ ಕರೆದೊಯ್ದು ಹೊಸ ಕಾರುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಕಾರು ಸ್ವೀಕರಿಸಿದ ಸಿಬ್ಬಂದಿ ಷೋರೂಮ್‌ನಿಂದ ಕಚೇರಿವರೆಗೂ ಹೊಸ ಕಾರುಗಳನ್ನು ಚಲಾಯಿಸಿಕೊಂಡು ಜಾಥಾ ರೀತಿ ಮಾಡಿ ಸಂಭ್ರಮಿಸಿದ್ದಾರೆ.
ಸಂಸ್ಥೆಗೆ 50 ವರ್ಷ
ತಮ್ಮ ಸಂಸ್ಥೆ ನಿರ್ಮಾಣವಾಗಿ 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಭಾಟಿಯಾ ಸಿಬ್ಬಂದಿಗೆ ಕಾರುಗಳನ್ನು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಭಾಟಿಯಾ, 'ಸಿಬ್ಬಂದಿಗೆ ಕಾರು ಕೊಟ್ಟೆನೆಂದು ಪ್ರಚಾರ ಪಡೆದುಕೊಳ್ಳೋದು ನಮ್ಮ ಉದ್ದೇಶವಲ್ಲ. ನಮ್ಮ ಸಂಸ್ಥೆಗೆ ನೌಕರರೇ ಜೀವಾಳ. ಅವರ ಶ್ರಮವನ್ನು ಗುರುತಿಸಿ ಮತ್ತಷ್ಟು ಅವರನ್ನು ಉತ್ತೇಜಿಸುವುದೇ ನಮ್ಮ ಗುರಿ. ಸಿಬ್ಬಂದಿ ಸಂತುಷ್ಟವಾಗಿದ್ದರೆ ಅದು ಸಂಸ್ಥೆ ಶ್ರೇಯೋಭಿವೃದ್ಧಿಗೆ ಸಹಕಾರಿ ಎಂದು ಹೇಳಿದ್ದಾರೆ.
'ನನ್ನ ಸಿಬ್ಬಂದಿಗಳು ನನ್ನ ಔಷಧ ಕಂಪನಿಗಳ ಬೆನ್ನೆಲುಬು. ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಮರ್ಪಣೆ ನಮ್ಮ ಯಶಸ್ಸಿನ ಅಡಿಪಾಯ. ಅವರ ಪ್ರಯತ್ನಗಳನ್ನು ಗುರುತಿಸುವುದು ಮತ್ತು ಅವರನ್ನು ಪ್ರೇರೇಪಿಸುವುದು ನನ್ನ ಏಕೈಕ ಗುರಿ - ಅವರನ್ನು ಪ್ರೇರೇಪಿಸುವುದು ಮತ್ತು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವುದು ನನ್ನ ಅಭಿಲಾಶೆಯಾಗಿದೆ. ತಂಡ ಸಂತೋಷವಾಗಿದ್ದಾಗ "ಕಂಪನಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಆಧುನಿಕ ಕಾರ್ಪೊರೇಟ್ ಸಂಸ್ಕೃತಿಯಲ್ಲಿ ಪ್ರೇರಣೆಯ ಮಾನದಂಡ' ಎಂದು ಭಾಟಿಯಾ ಅಭಿಪ್ರಾಯಪಟ್ಟಿದ್ದಾರೆ.
Advertisement