ನವದೆಹಲಿ: ಭಾರತ ಮತ್ತು ಅಮೆರಿಕ ದೇಶಗಳ ನಡುವಿನ ಬಹು ನಿರೀಕ್ಷಿತ ವ್ಯಾಪಾರ ಒಪ್ಪಂದದ ವಿಚಾರವಾಗಿ ಅಡ್ಡಿಯಾಗಿದ್ದ ಬಹುತೇಕ ಸಮಸ್ಯೆಗಳು ಇತ್ಯರ್ಥವಾಗಿವೆ ಎಂದು ಕೇಂದ್ರ ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತವು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಹಂತಕ್ಕೆ ಹತ್ತಿರದಲ್ಲಿದ್ದು, ಎರಡೂ ಕಡೆಯವರು ಹೆಚ್ಚಿನ ವಿಷಯಗಳ ಬಗ್ಗೆ ಒಪ್ಪಂದದ ಸಮೀಪದಲ್ಲಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭಾರತ ಯಾವುದೇ ಒಪ್ಪಂದಕ್ಕೆ ಆತುರಪಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಈ ಕುರಿತು ಮಾತನಾಡಿರುವ ಹೆಸರು ಹೇಳಲಿಚ್ಚಸದ ಅಧಿಕಾರಿಯೊಬ್ಬರು, 'ಹೆಚ್ಚಿನ ವಿಷಯಗಳಲ್ಲಿ ಒಮ್ಮುಖವಾಗಿದೆ. ಒಪ್ಪಂದವು ದೃಷ್ಟಿಯಲ್ಲಿದೆ' ಎಂದು ಹೇಳಿದ್ದಾರೆ.
ಅಂತೆಯೇ ಇದೇ ವಿಚಾರವಾಗಿ ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, 'ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಭಾರತದ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಭಾರತ ತನ್ನ ಸ್ವಹಿತಾಸಕ್ತಿಗೆ ಧಕ್ಕೆಯಾಗುವ ಒಪ್ಪಂದಗಳಿಗೆ ಸಹಿಹಾಕುವುದಿಲ್ಲ' ಎಂದು ಹೇಳಿದ್ದರು.
"ರಾಷ್ಟ್ರೀಯ ಹಿತಾಸಕ್ತಿಯನ್ನು ಹೊರತುಪಡಿಸಿ ಬೇರೆ ಯಾವುದೇ ಪರಿಗಣನೆಗಳ ಆಧಾರದ ಮೇಲೆ ಭಾರತವು ತನ್ನ ಸ್ನೇಹಿತರು ಯಾರು ಎಂದು ನಿರ್ಧರಿಸಿಲ್ಲ ಎಂದು ನಾನು ಭಾವಿಸುತ್ತೇನೆ. ಯಾರಾದರೂ ನನಗೆ (ನೀವು) EU ನೊಂದಿಗೆ ಸ್ನೇಹಿತರಾಗಲು ಸಾಧ್ಯವಿಲ್ಲ ಎಂದು ಹೇಳಿದರೆ ನಾನು ಅದನ್ನು ಸ್ವೀಕರಿಸುವುದಿಲ್ಲ. ಅವರು ಹೇಳಿದಕ್ಕೆಲ್ಲಾ ತಲೆಯಾಡಿಸುವ ಪರಿಸ್ಥಿತಿ ಈಗಿಲ್ಲ. ಅದು ಸ್ವೀಕಾರಾರ್ಹವೂ ಅಲ್ಲ' ಎಂದು ಪಿಯೂಷ್ ಗೋಯಲ್ ಹೇಳಿದ್ದರು.
ಒಪ್ಪಂದ ಮುಖ್ಯ ಷರತ್ತುಗಳು!
ಈ ಹಿಂದೆ ಭಾರತದ ವಿರುದ್ದ ಕೆಂಗಣ್ಣು ಬೀರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.50ರಷ್ಚು ಸುಂಕ ವಿಧಿಸಿದ್ದರು. ಅಮೆರಿಕದ ಈ ನಡೆಗೆ ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದೇ ಡೊನಾಲ್ಡ್ ಟ್ರಂಪ್ ಕೆಂಗಣ್ಣಿಗೆ ಕಾರಣವಾಗಿತ್ತು. ಇದಲ್ಲದೆ ಭಾರತದಲ್ಲಿ ಅಮೆರಿಕಕ್ಕೆ ಸೀಮಿತ ಮಾರುಕಟ್ಟೆ ಪ್ರವೇಶದ ವಿಚಾರವಾಗಿಯೂ ಟ್ರಂಪ್ ಭಾರತದ ಮೇಲೆ ಒತ್ತಡ ಹೇರಿದ್ದರು. ರಷ್ಯಾದ ಎಲ್ಲಾ ಆಮದುಗಳನ್ನು ನಿಲ್ಲಿಸುವಂತೆ ಅಮೆರಿಕ ಭಾರತವನ್ನು ಕೇಳಿಕೊಂಡಿದೆ. ಇವು ವ್ಯಾಪಾರ ಒಪ್ಪಂದಕ್ಕೆ ಪ್ರಮುಖ ಷರತ್ತುಗಳಾಗಿದ್ದವು.
ಈ ವರ್ಷದ ಫೆಬ್ರವರಿಯಲ್ಲಿ, ಭಾರತ ಮತ್ತು ಅಮೆರಿಕದ ನಾಯಕರು ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಕುರಿತು ಮಾತುಕತೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 2025 ರ ಅಂತ್ಯದ ವೇಳೆಗೆ ಒಪ್ಪಂದದ ಮೊದಲ ಕಂತನ್ನು ಮುಕ್ತಾಯಗೊಳಿಸಲು ಅವರು ಗಡುವನ್ನು ನಿಗದಿಪಡಿಸಿದ್ದಾರೆ.
ಪ್ರಸ್ತಾವಿತ ಒಪ್ಪಂದವು 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ಪ್ರಸ್ತುತ 191 ಬಿಲಿಯನ್ ಅಮೆರಿಕ ಡಾಲರ್‌ನಿಂದ 500 ಬಿಲಿಯನ್ ಅಮೆರಿಕ ಡಾಲರ್‌ಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. 2024-25ರಲ್ಲಿ ಸತತ ನಾಲ್ಕನೇ ವರ್ಷವೂ ಅಮೆರಿಕ ದ್ವಿಪಕ್ಷೀಯ ವ್ಯಾಪಾರದ ಮೌಲ್ಯ 131.84 ಶತಕೋಟಿ ಡಾಲರ್ ನೊಂದಿಗೆ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಉಳಿದಿದೆ.
Advertisement