

ಮುಂಬೈ: ಪ್ರೇಯಸಿ ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಭಗ್ನ ಪ್ರೇಮಿಯೋರ್ವ ಹಾಡಹಗಲೇ ಯುವತಿಯ ಕತ್ತು ಸೀಳಿದ ಭೀಕರ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಕಲಾಚೌಕಿ ಪ್ರದೇಶದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, 24 ವರ್ಷದ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ತನ್ನ ಮಾಜಿ ಗೆಳತಿಯನ್ನು ಬೆನ್ನಟ್ಟಿ ಮಾರಣಾಂತಿಕವಾಗಿ ಇರಿದು ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸೋನು ಬರಾಯಿ ಎಂಬಾತ ಮನಿಷಾ ಯಾದವ್ (24)ಯುವತಿಯನ್ನು ಪ್ರೀತಿಸುತ್ತಿದ್ದ. ಅವರಿಬ್ಬರ ನಡುವಿನ ಸಂಬಂಧ ಮುರಿದುಬಿದ್ದ ಸುಮಾರು ಎರಡು ವಾರಗಳ ನಂತರ ಆಕೆಯ ಮೇಲೆ ತೀವ್ರ ಹಲ್ಲೆ ಮಾಡಿ ಕೊಂದು ಹಾಕಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾದವ್ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದು, ಅವರನ್ನು ಬೈಕುಲ್ಲಾದ ಡಾ. ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ಮನಿಷಾ ಯಾದವ್ ತನ್ನನ್ನು ಬಿಟ್ಟು ಬೇರೊಬ್ಬ ಯುವಕನ ಸ್ನೇಹ ಬೆಳೆಸಿದ್ದಳು ಎಂದು ಸೋನು ಬರಾಯಿ ಅನುಮಾನಿಸಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಕೂಡ ಆಗಿತ್ತು. ಅಂತಿಮವಾಗಿ ಇಬ್ಬರೂ ತಮ್ಮ ಪ್ರೀತಿ ಕೊನೆಗೊಳಿಸಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಆರೋಪಿ ಸೋನು ಬರಾಯಿ ತನ್ನ ಮಾಜಿ ಗೆಳತಿಯನ್ನು ಭೇಟಿಯಾಗಲು ಕರೆದನು.
ಈ ವೇಳೆ ಅದಾಗಲೇ ಆಕೆಯನ್ನು ಕೊಂದು ಹಾಕಲು ಕೂಡ ಆತ ನಿರ್ಧರಿಸಿದ್ದ. ಹೀಗಾಗಿ ಆಕೆಯ ಭೇಟಿ ವೇಳೆ ಮನೆಯಿಂದಲೇ ಆತ ಒಂದು ಚಾಕು ಕೂಡ ತಂದಿದ್ದ. ಆಕೆ ಬರುತ್ತಲೇ ಆಕೆಯೊಂದಿಗೆ ಜಗಳ ತೆಗೆದಿದ್ದ ಸೋನು ಬರಾಯಿ ಎಲ್ಲರೆದುರೇ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.
ಈ ವೇಳೆ ಆಕೆ ತನ್ನ ಜೀವವನ್ನು ಉಳಿಸಲು ಓಡಿಹೋಗಿ ನರ್ಸಿಂಗ್ ಹೋಂಗೆ ಪ್ರವೇಶಿಸಿದ್ದಾಳೆ. ಆಕೆಯನ್ನು ಬೆನ್ವಟ್ಟಿದ ಸೋನು ಬರಾಯಿ ಆಸ್ಪತ್ರೆಯಲ್ಲೇ ಆಕೆಗೆ ಇರಿದಿದ್ದಾನೆ. ತಾನು ತಂದಿದ್ದ ಚಾಕುವಿನಿಂದ ಮನಸೋ ಇಚ್ಛೆ ಇರಿದಿದ್ದಾನೆ. ಬಳಿಕ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.
ಈ ವೇಳೆ ಆತನನ್ನು ತಡೆಯಲು ಸ್ಥಳೀಯರು ಯತ್ನಿಸಿದ್ದಾರೆಯಾದರೂ ಆತನ ಕೈಯಲ್ಲಿ ಹರಿತವಾದ ಚಾಕು ಇದ್ದಿದ್ದರಿಂದ ಆತನ ಬಳಿ ಹೋಗಲೂ ಹೆದರಿದ್ದಾರೆ. ಬಳಿಕ ಗುಂಪಲ್ಲಿದ್ದವರು ಆತನ ಮೇಲೆ ಕಲ್ಲು ಮತ್ತು ಕೋಲು ಎಸೆದು ಆತನನ್ನು ಹಿಡಿಯಲು ಯತ್ನಿಸಿದ್ದಾರೆ.
ಆದರೆ ಅಷ್ಟರಲ್ಲಾಗಲೇ ಸೋನು ಬರಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಇಬ್ಬರನ್ನೂ ಕೆಇಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Advertisement