

ಚೆನ್ನೈ: ಪ್ರೇಯಸಿ ಜೊತೆಗಿನ ಜಗಳದಿಂದ ಬೇಸತ್ತ ಪ್ರಿಯಕರ ಕಣ್ಣೀರು ಹಾಕುತ್ತಾ ನೋಡ ನೋಡುತ್ತಲೇ ಕೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ತಮಿಳುನಾಡಿನ ತಿರುವಾರೂರಿನಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದ ಪ್ರೇಮಿಗಳು ಬಳಿಕ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಆಕ್ರೋಶಗೊಂಡ ಯುವಕ ನೋಡ ನೋಡುತ್ತಲೇ ಓಡಿ ಹೋಗಿ ಪಕ್ಕದಲ್ಲೇ ಇದ್ದ ಕೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ ತಿರುವಾರೂರು ಜಿಲ್ಲೆಯ ಮರುದಪ್ಪತ್ತಿನಂ ಭಾಗಕ್ಕೆ ಸೇರಿದ ಪ್ರವೀಣ್ ಕುಮಾರ್ (ವಯಸ್ಸು 21) ಕಾಲೇಜು ವ್ಯಾಸಂಗ ಮುಗಿಸಿ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಪ್ರವೀಣ್ ಗೆ ಇನ್ಸ್ಟಾಗ್ರಾಮ್ ನಲ್ಲಿ ಕುಂಭಕೋಣಂ ಮೂಲದ ಜಯಶ್ರೀ (ವಯಸು 19) ಎಂಬ ಯುವತಿಯ ಪರಿಚಯವಾಗಿತ್ತು. ಬಳಿಕ ಈ ಪರಿಚಯ ಪ್ರೇಮಕ್ಕೆ ತಿರುಗಿತ್ತು.
ಆರಂಭದಲ್ಲಿ ಇಬ್ಬರ ನಡುವೆ ಸಂಬಂಧ ಚೆನ್ನಾಗಿತ್ತು. ಆದರೆ ಬಳಿಕ ಕಾರಣಾಂತರಗಳಿಂದ ಜಯಶ್ರೀ ಪ್ರವೀಣ್ ನನ್ನು ದೂರವಿಟ್ಟಿದ್ದಳು. ಇದರಿಂದ ಬೇಸತ್ತಿದ್ದ ಪ್ರವೀಣ್ ಆಕೆಯ ಜೊತೆ ಮಾತನಾಡಲು ಕುಂಭಕೋಣಂಗೂ ಹೋಗಿದ್ದ. ಈ ವೇಳೆ ತಿರುವಾರೂರಿನ ತಿರುಕ್ಕಣ್ಣಮಂಗೈ ಬಳಿ ಇರುವ ಸೇಟ್ಟಾಕುಳಂ ಕ್ರಾಸ್ ಬಳಿ ಜಯಶ್ರೀಯನ್ನು ಭೇಟಿಯಾಗಿ ಮಾತನಾಡಿದ್ದಾನೆ. ಅಲ್ಲದೆ ಆಕೆಯ ಮನವೊಲಿಸಲು ಯತ್ನಿಸಿದ್ದಾನೆ.
ಕೊನೆಯದಾಗಿ ಪ್ರೇಮಿಗಳು ಇಬ್ಬರೂ ಕೊಳದ ಹತ್ತಿರ ಕುಳಿತು ಮಾತನಾಡುತ್ತಿದ್ದಾಗ, ಯುವತಿ ಪ್ರೀತಿ-ಪ್ರೇಮ ಎಲ್ಲ ಬೇಡ ಎಂದು ಖಚಿತವಾಗಿ ನಿರಾಕರಿಸಿದ್ದಾರೆ. ಮನೆಯಲ್ಲಿ ಪೋಷಕರು ನಮ್ಮ ಪ್ರೀತಿ ಒಪ್ಪುವುದಿಲ್ಲ. ಹೀಗಾಗಿ ಎಲ್ಲವನ್ನೂ ಇಲ್ಲಿಗೆ ನಿಲ್ಲಿಸೋಣ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಇದರಿಂದ ಬೇಸರಗೊಂಡ ಯುವಕ ಇದ್ದಕ್ಕಿದ್ದಂತೆ ಆಕ್ರೋಶಗೊಂಡು ಓಡಿ ಹೋಗಿ ಕೊಳಕ್ಕೆ ಹಾರಿದ್ದಾನೆ.
ಪ್ರವೀಣ್ ನಡೆಗೆ ಆಘಾತ ವ್ಯಕ್ತಪಡಿಸಿದ ಯುವತಿ ಜಯಶ್ರೀ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕೊಳಕ್ಕೆ ಧುಮುಕಿದ ಸ್ಥಳೀಯರು ಪ್ರವೀಣ್ ನನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪ್ರವೀಣ್ ಸಿಗಲಿಲ್ಲ. ಹೀಗಾಗಿ ಗ್ರಾಮಸ್ಥರು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿ ಪ್ರವೀಣ್ ದೇಹವನ್ನು ಹೊರ ತೆಗೆದಿದ್ದಾರೆ.
ಕೂಡಲೇ ಪ್ರವೀಣ್ ನನ್ನು ತಿರುವರೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಆದರೆ ಪ್ರವೀಣ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ಜಯಶ್ರೀ ಕೂಡ ಅನಾರೋಗ್ಯಕ್ಕೀಡಾಗಿದ್ದು ಅವರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆ ಕುರಿತು ಕುಡವಾಸಲ್ ಪೊಲೀಸರು ವಿಚಾರಣೆ ನಡೆಸಿದ್ದಾರೆ.
Advertisement