

ಪುಣೆ: 'ಡಿಜಿಟಲ್ ಅರೆಸ್ಟ್' ಹಗರಣದಲ್ಲಿ 1.2 ಕೋಟಿ ರೂ. ಕಳೆದುಕೊಂಡ ಒಂದು ತಿಂಗಳ ನಂತರ ಪುಣೆಯ 83 ವರ್ಷದ ವೃದ್ಧರೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಪೊಲೀಸ್ ಮತ್ತು ಸಿಬಿಐ ಅಧಿಕಾರಿಗಳಂತೆ ನಟಿಸಿ ವಂಚಕರು ಅವರನ್ನು ಮತ್ತು ಅವರ ಪತ್ನಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪ್ರಮುಖ ವ್ಯಕ್ತಿಯೊಬ್ಬರು ಭಾಗಿಯಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ ಎಂದು ಹೇಳಿ ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದ ವ್ಯಕ್ತಿಯನ್ನು ವಂಚಕರು ಬೆದರಿಸಿದ್ದಾರೆ.
'ವ್ಯಕ್ತಿ ಹೃದಯಾಘಾತದಿಂದ ಸಾವಿಗೀಡಾದ ಒಂದು ವಾರದ ನಂತರ ಮಂಗಳವಾರ, ಆ ವ್ಯಕ್ತಿಯ ಪತ್ನಿ ಈ ಸಂಬಂಧ ದೂರು ದಾಖಲಿಸಿದ್ದಾರೆ' ಎಂದು ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಪುಣೆ ಮೂಲದವರಾದ ವ್ಯಕ್ತಿಗೆ ಆಗಸ್ಟ್‌ನಲ್ಲಿ ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿ ಎಂದು ಹೇಳಿಕೊಳ್ಳುತ್ತಾ ವ್ಯಕ್ತಿಯೊಬ್ಬರು ಕರೆ ಮಾಡಿದ್ದಾರೆ. 'ನರೇಶ್ ಗೋಯಲ್ ಹಣ ಅಕ್ರಮ ವರ್ಗಾವಣೆ ಪ್ರಕರಣ'ದಲ್ಲಿ ನೀವು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದಿದ್ದಾನೆ. ಆದರೆ, ಅವರು ನಿರಾಕರಿಸಿದ್ದಾರೆ. ಬಳಿಕ ಮತ್ತೊಂದು ವಿಡಿಯೋ ಕರೆಯ ಸಮಯದಲ್ಲಿ, ಐಪಿಎಸ್ ಅಧಿಕಾರಿ ವಿಜಯ್ ಖನ್ನಾ ಮತ್ತು ಸಿಬಿಐ ಅಧಿಕಾರಿ ದಯಾ ನಾಯಕ್ ಎಂದು ಹೇಳಿದ ಇಬ್ಬರು ವಂಚಕರು ಅವರು ಮತ್ತು ಅವರ ಪತ್ನಿಯನ್ನು ಬಂಧಿಸಲಾಗುವುದು ಎಂದು ಬೆದರಿಕೆಯೊಡ್ಡಿದ್ದಾರೆ' ಎಂದು ಸೈಬರ್ ಪೊಲೀಸ್ ಅಧಿಕಾರಿ ಹೇಳಿದರು.
ನಂತರ ದಂಪತಿಯನ್ನು ಗಂಟೆಗಳ ಕಾಲ ವಿಡಿಯೋ ಕರೆಯಲ್ಲೇ ಇರಲು ಒತ್ತಾಯಿಸಲಾಗಿದೆ. ಆ ಸಮಯದಲ್ಲಿ ನೀವು 'ಡಿಜಿಟಲ್ ಅರೆಸ್ಟ್'ನಲ್ಲಿದ್ದೀರ' ಎಂದು ಅವರಿಗೆ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುವ ನೆಪದಲ್ಲಿ, ವಂಚಕರು ಆಗಸ್ಟ್ 16 ರಿಂದ ಸೆಪ್ಟೆಂಬರ್ 17ರ ನಡುವೆ 1.19 ಕೋಟಿ ರೂ.ಗಳನ್ನು ಹಲವು ಖಾತೆಗಳಿಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಪ್ರಕರಣದಿಂದ ಅವರ ಹೆಸರುಗಳನ್ನು ತೆರವುಗೊಳಿಸಿದ ನಂತರ ಹಣವನ್ನು ಹಿಂತಿರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ವಂಚನೆಯ ಬಗ್ಗೆ ತಿಳಿದ ನಂತರ, ನಾವು ದಂಪತಿಗೆ ಬಂದು ಎಫ್‌ಐಆರ್ ದಾಖಲಿಸಲು ಕೇಳಿಕೊಂಡೆವು. ಆದರೆ, ಅವರು ತಮ್ಮ ಮಗಳು ವಿದೇಶದಿಂದ ಬಂದ ನಂತರವೇ ಹಾಗೆ ಮಾಡುವುದಾಗಿ ಹೇಳಿದರು ಎಂದು ಅಧಿಕಾರಿ ಹೇಳಿದರು.
ಆದರೆ, ಸಂತ್ರಸ್ತ ವ್ಯಕ್ತಿ ಕಳೆದ ವಾರ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
'ವಂಚನೆ ಮತ್ತು ಹೃದಯಾಘಾತಕ್ಕೆ ನೇರ ಸಂಬಂಧವಿಲ್ಲ. ನಂತರ ಅವರ ಪತ್ನಿ, ಅವರ ಮಗಳೊಂದಿಗೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ' ಎಂದು ಅಧಿಕಾರಿ ಹೇಳಿದರು.
Advertisement