
ಪಾಟ್ನಾ: ದೇಶದ ವಿವಿಧ ಭಾಗಗಳಲ್ಲಿ ಸರಿಯಾದ ರಸ್ತೆಗಳಿಲ್ಲದೆ ಜನ ಅವಸ್ಥೆ ಪಡುತ್ತಿದ್ದರೆ, ಇಲ್ಲೊಂದು ಗ್ರಾಮದಲ್ಲಿ ರಸ್ತೆಗೆ ಹಾಕಿದ್ದ ಕಾಂಕ್ರೀಟ್ ಅನ್ನೇ ಗ್ರಾಮಸ್ಥರು ಹೊತ್ತೊಯ್ದಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಗ್ರಾಮಾಂತರ ಪ್ರದೇಶದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ ಕಾಂಕ್ರೀಟ್ ಮಾಡಿತ್ತು. ಆದರೆ ಅತ್ತ ಅಧಿಕಾರಿಗಳು ರಸ್ತೆಗೆ ಕಾಂಕ್ರೀಟ್ ಮಾಡಿ ಹೋದ ಬೆನ್ನಲ್ಲೇ ಇತ್ತ ಗ್ರಾಮಸ್ಥರು ರಸ್ತೆಗೆ ಹಾಕಿದ್ದ ಕಾಂಕ್ರೀಟ್ ಅನ್ನು ಕಿತ್ತು ಬಕೆಟ್ ಗೆ ತುಂಬಿಸಿಕೊಂಡು ಹೋಗಿದ್ದಾರೆ.
ಗ್ರಾಮದ ಕೆಲ ಮಹಿಳೆಯರು ಮತ್ತು ಗ್ರಾಮಸ್ಥರು ಬಕೆಟ್ ಮತ್ತು ಸಲಿಕೆಗಳನ್ನು ತಂದು ರಸ್ತೆಗೆ ಹಾಕಿದ್ದ ಕಾಂಕ್ರೀಟ್ ಅನ್ನು ಬಗೆದು ತುಂಬಿಸಿಕೊಂಡು ಹೋಗಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿಲ್ಲವಾದರೂ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಂತೆ ಬಿಹಾರದ ಜೆಹಾನಾಬಾದ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಆದರೆ ಈ ಬಗ್ಗೆ ಬಿಹಾರ ಸರ್ಕಾರದಿಂದ ಅಥವಾ ಜೆಹಾನಾಬಾದ್ ಜಿಲ್ಲಾಡಳಿತದಿಂದ ಯಾವುದೇ ಸ್ಪಷ್ಟನೆ ಹೊರಬಂದಿಲ್ಲ. ಆದಾಗ್ಯೂ ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
@theskindoctor13 ಎಂಬ X ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಜನರು ಚೀಲಗಳಲ್ಲಿ ಮತ್ತು ತಲೆಯ ಮೇಲೆ ಹೊಸ ಕಾಂಕ್ರೀಟ್ ತುಂಬಿಸಿಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ತೋರಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ
ಇನ್ನು ಗ್ರಾಮಸ್ಥರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, 'ಗ್ರಾಮೀಣ ಸಂಪರ್ಕವನ್ನು ಸುಧಾರಿಸುವ ಉದ್ದೇಶದಿಂದ ಸಾರ್ವಜನಿಕ ಹಣವನ್ನು ಬಳಸಿಕೊಂಡು ರಸ್ತೆಯನ್ನು ನಿರ್ಮಿಸಲಾಗಿದೆ.
ಇಂತಹ ಕೃತ್ಯಗಳು ತೆರಿಗೆದಾರರ ಹಣವನ್ನು ವ್ಯರ್ಥ ಮಾಡುವುದಲ್ಲದೆ, ಇಡೀ ಸಮುದಾಯಕ್ಕೆ ಪ್ರಯೋಜನಕಾರಿಯಾದ ಅಗತ್ಯ ಮೂಲಸೌಕರ್ಯವನ್ನು ಹಾನಿಗೊಳಿಸುತ್ತವೆ ಎಂದು ಓರ್ವ ಬಳಕೆದಾರ ಕಿಡಿಕಾರಿದ್ದಾರೆ.
ಮತ್ತೋರ್ವ ಬಳಕೆದಾರ, 'ಈ ಘಟನೆಯು ಸರ್ಕಾರಿ ಯೋಜನೆಗಳ ಮೇಲೆ ಕಾನೂನು ಕ್ರಮಗಳ ಮೇಲ್ವಿಚಾರಣೆ ಮತ್ತು ನಾಗರಿಕ ಜವಾಬ್ದಾರಿಯನ್ನು ಉತ್ತೇಜಿಸಲು ಜಾಗೃತಿ ಅಭಿಯಾನಗಳ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ. ಅಧಿಕಾರಿಗಳು ಇನ್ನೂ ಏಕೆ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ?' ಎಂದು ಪ್ರಶ್ನಿಸಿದರು.
Advertisement