
ರಾಯ್ ಬರೇಲಿ: ಮತ ಕಳ್ಳತನ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಗೆ ಅವರದ್ದೇ ಸ್ವಕ್ಷೇತ್ರದಲ್ಲೇ ತೀವ್ರ ಮುಜುಗರವಾಗಿದೆ.
ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಶುಕ್ರವಾರ ನಡೆದ ದಿಶಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಚಿವ ದಿನೇಶ್ ಪ್ರತಾಪ್ ಸಿಂಗ್ ನಡುವೆ ನಡೆದ ತೀವ್ರ ವಾಗ್ವಾದ ನಡೆದಿದ್ದು, ರಾಹುಲ್ ಗಾಂಧಿ ಅವರ ಸೂಚನೆಗಳನ್ನು ತಾವು ಪಾಲಿಸುವುದಿಲ್ಲ ಎಂದು ದಿನೇಶ್ ಪ್ರತಾಪ್ ಸಿಂಗ್ ಹೇಳಿರುವ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ರಾಯ್ ಬರೇಲಿಯ ಕಲೆಕ್ಟರೇಟ್ ಸಭಾಂಗಣದಲ್ಲಿ ಇಂದು ನಡೆದ ದಿಶಾ ಸಭೆಯಲ್ಲಿ ಈ ಘಟನೆ ನಡೆದಿದ್ದು, ಸಮಿತಿಯ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಎಲ್ಲಾ ಚರ್ಚೆಗಳನ್ನು ತಮ್ಮ ಸಮಾಲೋಚನೆಯೊಂದಿಗೆ ನಡೆಸಬೇಕೆಂದು ಸದಸ್ಯರನ್ನು ಒತ್ತಾಯಿಸಿದರು.
ಈ ವೇಳೆ ಸಭೆಯಲ್ಲಿದ್ದ ಉತ್ತರ ಪ್ರದೇಶ ಸಚಿವ ದಿನೇಶ್ ಪ್ರತಾಪ್ ಸಿಂಗ್, 'ಸಂಸತ್ತಿನಲ್ಲಿ ಸ್ಪೀಕರ್ ನಿರ್ದೇಶನಗಳನ್ನು ರಾಹುಲ್ ಗಾಂಧಿ ಪಾಲಿಸದ ಕಾರಣ, ನಾವು ಅವರ ಸೂಚನೆಗಳನ್ನು ಕೇಳಲು ಬದ್ಧರಲ್ಲ ಎಂದು ಹೇಳಿದರು.
ಈ ವೇಳೆ ರಾಹುಲ್ ಗಾಂಧಿ ಮತ್ತು ದಿನೇಶ್ ಪ್ರತಾಪ್ ಸಿಂಗ್ ನಡುವೆ ಮಾತಿನ ಚಕಮಕಿ ನಡೆಯಿತು.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಕುರಿತು ರಾಹುಲ್ ಗಾಂಧಿ ಈ ಹಿಂದೆ ನೀಡಿದ್ದ ಹೇಳಿಕೆಗಳ ಉಲ್ಲೇಖ ಮಾಡಿದ ಸಚಿವ ದಿನೇಶ್ ಪ್ರತಾಪ್ ಸಿಂಗ್, 'ಬಿಹಾರದಲ್ಲಿ ಪ್ರಧಾನಿ ಮೋದಿಯವರ ತಾಯಿಯ ಬಗ್ಗೆ ಅಗೌರವದ ಹೇಳಿಕೆಗಳ ನೀಡಿದ್ದಾರೆ.
ಪ್ರಧಾನಿಯವರ ತಾಯಿಯ ಬಗ್ಗೆ ಇಂತಹ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಪಕ್ಷದ ಕಾರ್ಯಕರ್ತರನ್ನು ಖಂಡಿಸಬೇಕು ಎಂದರು.
ಇನ್ನು ಈ ಸಭೆಯಲ್ಲಿ ಅಮೇಥಿ ಸಂಸದ ಕೆ.ಎಲ್. ಶರ್ಮಾ ಮತ್ತು ಹಲವಾರು ಸಾರ್ವಜನಿಕ ಪ್ರತಿನಿಧಿಗಳು ಭಾಗವಹಿಸಿದ್ದರು, ಆದರೆ ಉಂಚಹಾರ್ ಶಾಸಕ ಮನೋಜ್ ಕುಮಾರ್ ಪಾಂಡೆ ಗಮನಾರ್ಹವಾಗಿ ಗೈರುಹಾಜರಾಗಿದ್ದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಪ್ರತಾಪ್ ಸಿಂಗ್, 'ರಾಹುಲ್ ಗಾಂಧಿಯವರು ದಿಶಾ ಮಾರ್ಗಸೂಚಿಗಳ ಹೊರಗೆ ಸಭೆ ನಡೆಸಲು ಬಯಸಿದ್ದರು. ಆದರೆ ಅದನ್ನು ನಾವು ವಿರೋಧಿಸಿದೆವು. ನಾವು ತಪ್ಪು ಹೇಳಿಕೆಗಳನ್ನು ಸ್ವೀಕರಿಸುವ ಅಗತ್ಯವಿಲ್ಲ. ರಾಹುಲ್ ಗಾಂಧಿಯವರು ಒಂದು ತಂಡ ಮತ್ತು ಮೂರು ಪುಟಗಳ ಕರಡುಗಳೊಂದಿಗೆ ಬರುತ್ತಾರೆ ಎಂದು ಹೇಳಿದರು.
ಬಳಿಕ ಉಭಯ ನಾಯಕರು ಪರಸ್ಪರ ಚಹಾ ಸೇವನೆ ಮಾಡಿದರು. ಈ ವೇಳೆ ರಾಹುಲ್ ಗಾಂಧಿ ದಿನೇಶ್ ಪ್ರತಾಪ್ ಸಿಂಗ್ ಅವರಿಗೆ ಹೆಚ್ಚುವರಿ ಚಹಾ ಮತ್ತು ಬಿಸ್ಕತ್ತುಗಳನ್ನು ನೀಡಿದರು. ಬಳಿಕ ತಮಾಷೆಯಾಗಿ ಮಾತನಾಡಿದ ಉಭಯ ನಾಯಕರು ನಗುತ್ತಾ ತಮ್ಮ ನಡುವಿನ ಉದ್ವಿಗ್ನತೆಯನ್ನು ಶಮನ ಮಾಡಿಕೊಂಡರು.
ಅಂದಹಾಗೆ 2018 ರಲ್ಲಿ ಬಿಜೆಪಿಗೆ ಸೇರಿದ ಮಾಜಿ ಕಾಂಗ್ರೆಸ್ ಸದಸ್ಯ ದಿನೇಶ್ ಪ್ರತಾಪ್ ಸಿಂಗ್, ರಾಯ್ಬರೇಲಿ ಕ್ಷೇತ್ರದಿಂದ ಗಾಂಧಿ ಕುಟುಂಬದ ವಿರುದ್ಧ ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲೂ ಇದೇ ರಾಯ್ ಬರೇಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ದಿನೇಶ್ ಪ್ರತಾಪ್ ಸಿಂಗ್ ರಾಹುಲ್ ಗಾಂಧಿ ಅವರ ವಿರುದ್ಧ ಸೆಣಸಿ ಸೋಲು ಕಂಡಿದ್ದರು.
Advertisement