
ವಾಷಿಂಗ್ಟನ್: ರಫ್ತುದಾರರಿಗೆ ಅನಿಶ್ಚಿತತೆ ಸೃಷ್ಟಿಸಿರುವ ಸುಂಕದ ಸಮಸ್ಯೆಗಳನ್ನು ಪರಿಹರಿಸಲು ಭಾರತ ಮತ್ತು ಅಮೆರಿಕದ ಮುಖ್ಯ ಸಮಾಲೋಚಕರು ಉದ್ದೇಶಿತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಸಹಾಯಕ ವ್ಯಾಪಾರದ ಪ್ರತಿನಿಧಿ ಬ್ರೆಂಡನ್ ಲಿಂಚ್ ಅಮೆರಿಕದ ತಂಡವನ್ನು ಮುನ್ನಡೆಸುತ್ತಿದ್ದರೆ, ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರವಾಲ್ ಅವರು ಭಾರತದ ಮುಖ್ಯ ಸಂಧಾನಕಾರರಾಗಿದ್ದಾರೆ.
ಲಿಂಚ್ ತನ್ನ ಭಾರತೀಯ ಸಹವರ್ತಿಯೊಂದಿಗೆ ಒಂದು ದಿನದ ಮಾತುಕತೆಗಾಗಿ ಸೋಮವಾರ ತಡರಾತ್ರಿ ಭಾರತಕ್ಕೆ ಆಗಮಿಸಿದರು. ರಷ್ಯಾದ ಕಚ್ಚಾ ತೈಲ ಖರೀದಿಗಾಗಿ ಅಮೆರಿಕ ಭಾರತೀಯ ಸರಕುಗಳ ಮೇಲೆ ಶೇ. 25 ರಷ್ಟು ಹೆಚ್ಚುವರಿ ಸುಂಕ ಸೇರಿದಂತೆ ಒಟ್ಟಾರೇ ಶೇ.50 ರಷ್ಟು ಸುಂಕ ವಿಧಿಸಿದ ನಂತರ ಅಮೆರಿಕದ ಉನ್ನತ ಶ್ರೇಣಿಯ ಅಧಿಕಾರಿಯ ಭಾರತದ ಮೊದಲ ಭೇಟಿ ಇದಾಗಿದೆ.
"ವ್ಯಾಪಾರ ಮಾತುಕತೆ ಪ್ರಾರಂಭವಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ. ಭಾರತವು ಶೇಕಡಾ 50 ರಷ್ಟು ಸುಂಕವನ್ನು ಅನ್ಯಾಯ ಮತ್ತು ಅಸಮಂಜಸ ಎಂದು ಬಣ್ಣಿಸಿದೆ. ಫೆಬ್ರವರಿಯಲ್ಲಿ, ಉಭಯ ದೇಶಗಳ ನಾಯಕರು ಉದ್ದೇಶಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಕುರಿತು ಮಾತುಕತೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಒಪ್ಪಂದದ ಮೊದಲ ಕಂತನ್ನು 2025 ರ ಅರ್ಧವರ್ಷದೊಳಗೆ ಮುಗಿಸಲು ಯೋಜಿಸಲಾಗಿತ್ತು. ಇದುವರೆಗೆ ಐದು ಸುತ್ತಿನ ಮಾತುಕತೆಗಳು ನಡೆದಿವೆ ಮತ್ತು ಆಗಸ್ಟ್ 25-29 ರವರೆಗೆ ನಿಗದಿಯಾಗಿದ್ದ ಆರನೇ ಸುತ್ತಿನ ಮಾತುಕತೆಗಳು ಹೆಚ್ಚಿನ ಆಮದು ಸುಂಕವನ್ನು ವಿಧಿಸಿದ ನಂತರ ಮುಂದೂಡಲ್ಪಟ್ಟಿವೆ.
ಲಿಂಚ್ ಮತ್ತು ಭಾರತೀಯ ಅಧಿಕಾರಿಗಳ ನಡುವಿನ ಸಭೆಯನ್ನು 6 ನೇ ಸುತ್ತಿನ ಮಾತುಕತೆ ಎಂದು ಪರಿಗಣಿಸಬಾರದು, ಆದರೆ ಅದರ ಪೂರ್ವಭಾವಿ ಎಂದು ವಾಣಿಜ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತ ಮತ್ತು ಯುಎಸ್ ವಾರಕ್ಕೊಮ್ಮೆ ವರ್ಚುವಲ್ ಮೋಡ್ ಮೂಲಕ ಚರ್ಚೆಯಲ್ಲಿ ತೊಡಗಿವೆ ಎಂದು ಅವರು ತಿಳಿಸಿದ್ದಾರೆ.
ಪೀಟರ್ ನವಾರೊ ಹೇಳಿದ್ದು ಏನು?
ಈ ಮಧ್ಯೆ ಇತರ ಪ್ರಮುಖ ರಾಷ್ಟ್ರಗಳಿಗಿಂತ ಹೆಚ್ಚಿನ ಸುಂಕ ವಿಧಿಸಿರುವ ಭಾರತದೊಂದಿಗೆ ಇಂದು ಮಾತುಕತೆ ನಡೆಯಲಿದೆ ಎಂದು ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವಾರೊ ಹೇಳಿದ್ದಾರೆ. ಭಾರತ-ಯುಎಸ್ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆಗೂ ಮುನ್ನಾ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ.
ಭಾರತೀಯ ಸರಕುಗಳ ಮೇಲೆ ಯುಎಸ್ ಶೇ. 50 ರಷ್ಟು ಆಮದು ಸುಂಕ ವಿಧಿಸಿದ ನಂತರ ತೀವ್ರ ಪರಿಣಾಮ ಬೀರಿದ್ದು, ಭಾರತ ಮಾತುಕತೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಏನೇ ಮಾಡಿದರೂ ಅತ್ಯಂತ ಸಮಾಧಾನಕರ, ಒಳ್ಳೆಯ, ರಚನಾತ್ಮಕ ಟ್ವೀಟ್ ಅನ್ನು ಕಳುಹಿಸಿದ್ದಾರೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ ಎಂದು ಪೀಟರ್ ನವರೊ ಸೋಮವಾರ ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
Advertisement