
ಮುಂಬೈ: ದೇಶದ ಐಟಿ ಸೇವಾ ದೈತ್ಯ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಕಂಪನಿಯು ತನ್ನ ಉದ್ಯೋಗಿಗಳಿಂದ ಬಲವಂತದ ರಾಜೀನಾಮೆ ಪಡೆಯುತ್ತಿದೆ ಎಂಬ ಗಂಭೀರ ಆರೋಪವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಐಟಿ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಿಬ್ಬಂದಿಗಳ ವಜಾ ಪ್ರಕ್ರಿಯೆ ಸಾಮಾನ್ಯವಾಗಿದ್ದು, ಕೆಲ ಸಂಸ್ಥೆಗಳು ಉದ್ಯೋಗಿಗಳನ್ನು ಬಲವಂತವಾಗಿ ಉದ್ಯೋಗ ತೊರೆಯುವಂತೆ ಒತ್ತಡ ಹೇರುತ್ತಿವೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿವೆ.
ಇದಕ್ಕೆ ಇಂಬು ನೀಡುವಂತೆ ಇದೀಗ ದೇಶದ ಐಟಿ ದೈತ್ಯ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಕಂಪನಿಯು (TCS) ತನ್ನ ಉದ್ಯೋಗಿಗಳಿಂದ ಬಲವಂತವಾಗಿ ರಾಜಿನಾಮೆ ಪಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವೃತ್ತಿಪರರ ಖ್ಯಾತ ಸಾಮಾಜಿಕ ಜಾಲತಾಣ ರೆಡ್ಡಿಟ್ ನಲ್ಲಿ ಈ ಕುರಿತು ಪೋಸ್ಟ್ ಗಳು ಬಂದಿದ್ದು, ಈ ಪೋಸ್ಟ್ ಗಳು ಇದೀಗ ವೈರಲ್ ಆಗುತ್ತಿವೆ. 30 ವರ್ಷಗಳ ಕಾಲ ಕೆಲಸ ಮಾಡಿದ ಉದ್ಯೋಗಿಯೊಬ್ಬರಿಗೆ ಟಾಟಾ ಸಂಸ್ಥೆ 20 ನಿಮಿಷಗಳಲ್ಲಿ ಸ್ವಯಂ ನಿವೃತ್ತಿ ಅಥವಾ ವಜಾ ಎಂಬ ಎರಡು ಆಯ್ಕೆ ನೀಡಿತ್ತು. ಕೆಲಸ ತೊರೆದರೆ ಯಾವುದೇ ಪರಿಹಾರ ನೀಡಲಾಗಿಲ್ಲ ಎಂದು ಉದ್ಯೋಗಿ ಎಂದು ಹೇಳಿಕೊಂಡ ವ್ಯಕ್ತಿ ಆರೋಪಿಸಿದ್ದಾರೆ.
ಅದೇ ರೀತಿ, ಉತ್ತರ ಪ್ರದೇಶದ ನೋಯ್ಡಾದ ಉದ್ಯೋಗಿಯೊಬ್ಬರು ಯಾವುದೇ ಪೂರ್ವ ಸೂಚನೆ ಇಲ್ಲದೆ ಸಂಸ್ಥೆಯ ಮಾನವ ಸಂಪನ್ಮೂಲ ಇಲಾಖೆಯು ತನ್ನನ್ನು ವಜಾಗೊಳಿಸಿದೆ ಎಂದು ಆರೋಪಿಸಿದ್ದಾರೆ.
"ನನ್ನನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ನನ್ನ ಮೊಬೈಲ್ ಫೋನ್‌ಗೆ ಸಂದೇಶ ಬಂದಿತು. ನಾನು ತಕ್ಷಣ ನನ್ನ HR ಗೆ ಸಂದೇಶ ಕಳುಹಿಸಿದೆ. ಆದರೆ ಅವರು ಪ್ರತಿಕ್ರಿಯಿಸಲಿಲ್ಲ. ಹಾಗಾಗಿ ನಾನು ಖುದ್ದಾಗಿ ಹೋಗಿ ಕೇಳಿದೆ. ನನ್ನ ಸುರಕ್ಷತೆಗಾಗಿ, ನಾನು ನನ್ನ ಮೊಬೈಲ್ ಫೋನ್‌ನಲ್ಲಿ ವೀಡಿಯೊ ಕೂಡ ತೆಗೆದುಕೊಂಡೆ. ನಂತರ ಮತ್ತೊಬ್ಬ HR ನನ್ನ ಮೇಲೆ ದಾಳಿ ಮಾಡಿ ನನ್ನ ತೋಳನ್ನು ತಿರುಚಿದರು. ಇದರಿಂದ ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಹಿರಿಯ ಸಿಬ್ಬಂದಿಗಳು ಮಾತ್ರವಲ್ಲ.. ನೂತನ ಸಿಬ್ಬಂದಿಗಳೂ ಟಾರ್ಗೆಟ್
ಇನ್ನು ಮತ್ತೊಂದು ಪೋಸ್ಟ್ ನಲ್ಲಿ ಕೇವಲ ಹಿರಿಯ ಸಿಬ್ಬಂದಿಗಳು ಮಾತ್ರವಲ್ಲ.. ಹೊಸದಾಗಿ ಸೇರ್ಪಡೆಗೊಂಡ ಕೆಲವು ಉದ್ಯೋಗಿಗಳೂ ಕೂಡ ವಜಾಗೊಂಡಿದ್ದಾರೆ. HR ಅಧಿಕಾರಿ 15 ನಿಮಿಷಗಳಲ್ಲಿ ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದಾರೆ. ಅಲ್ಲದೆ ರಾಜೀನಾಮೆ ಪತ್ರದಲ್ಲಿ ವೈಯಕ್ತಿಕ ಕಾರಣಗಳನ್ನು ನಮೂದಿಸುವಂತೆ ಒತ್ತಾಯಿಸಿದರು ಮತ್ತೆ ಕೆಲವರು ಆರೋಪಿಸಿದ್ದಾರೆ. ಒಂದು ವೇಳೆ ಅವರು ನಿರಾಕರಿಸಿದರೆ ಅವರಿಗೆ 'ನಕಾರಾತ್ಮಕ ಬಿಡುಗಡೆ ಪತ್ರ'ದ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿದೆ.
30 ಸಾವಿರ ಉದ್ಯೋಗಿಗಳಿಗೆ ಕುತ್ತು!
ವರದಿಯೊಂದರ ಪ್ರಕಾರ ಟಿಸಿಎಸ್ ನಲ್ಲಿ ನಡೆಯುತ್ತಿರುವ ಈ ವಜಾ ಪ್ರಕ್ರಿಯೆಯಿಂದಾಗಿ ಮೇಲ್ನೋಟಕ್ಕೆ 12 ಸಾವಿರ ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಹೇಳಲಾಗಿದ್ದರೂ, ಈ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ದೇಶಾದ್ಯಂತ ಇರುವ ಉದ್ಯೋಗಿಗಳ ಪೈಕಿ ಸುಮಾರು 30 ಸಾವಿರ ಮಂದಿ ಮೇಲೆ ವಜಾ ತೂಗುಗತ್ತಿ ತೂಗುತ್ತಿದೆ ಎನ್ನಲಾಗಿದೆ.
2025-26ರಲ್ಲಿ 12,000 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿದೆ ಎಂದು ಸಂಸ್ಥೆ ಈ ಹಿಂದೆ ಘೋಷಿಸಿದ್ದರೂ, ವಜಾಗೊಳಿಸಬೇಕಾದ ಉದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಈಗ ಹೊರಹೊಮ್ಮುತ್ತಿದೆ.
ಇತ್ತೀಚೆಗೆ, ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಟಿಸಿಎಸ್ ಘಟಕದಿಂದ 1000 ಉದ್ಯೋಗಿಗಳನ್ನು ಬಲವಂತವಾಗಿ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.
ಆರೋಪ ನಿರಾಕರಿಸಿದ ಟಾಟಾ!
ಇನ್ನು ಈ ವಜಾ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಟಾಟಾ ಸಂಸ್ಥೆ ತನ್ನ ವಿರುದ್ಧ ಎಲ್ಲ ಆರೋಪಗಳನ್ನು ನಿರಾಕರಿಸಿದೆ. 'ನಮ್ಮ ಉದ್ಯೋಗಿ ವಿಭಾಗಗಳು ಯಾವಾಗಲೂ ನೈತಿಕತೆ ಮತ್ತು ಪಾರದರ್ಶಕತೆಯೊಂದಿಗೆ ಕಾರ್ಯನಿರ್ವಹಿಸಿವೆ' ಎಂದು ಹೇಳಿದೆ.
Advertisement