
ನವದೆಹಲಿ: ತಮಿಳುನಾಡಿನ ಕರೂರಿನಲ್ಲಿ ನಿನ್ನೆ ಸಂಜೆ ನಡೆದ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಬಲಿಯಾದ 39 ಜನರ ಕುಟುಂಬಗಳಿಗೆ ನಟ-ರಾಜಕಾರಣಿ ವಿಜಯ್ ತಲಾ 20 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೆ, ದುರಂತದಲ್ಲಿ ಗಾಯಗೊಂಡ ಸುಮಾರು 100 ಜನರಿಗೆ ತಮ್ಮ ಪಕ್ಷವು ತಲಾ 2 ಲಕ್ಷ ರೂ.ಗಳನ್ನು ನೀಡಲಿದೆ ಎಂದು ಟಿವಿಕೆ ಮುಖ್ಯಸ್ಥರು ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿನ ಪೋಸ್ಟ್‌ನಲ್ಲಿ, 'ತಾನು ದುಃಖದಿಂದ ಮುಳುಗಿದ್ದೇನೆ. ನನ್ನ ಹೃದಯ ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ಪದಗಳೇ ಸಾಲುತ್ತಿಲ್ಲ. ನನ್ನ ಕಣ್ಣುಗಳು ಮತ್ತು ಮನಸ್ಸು ದುಃಖದಿಂದ ಆವೃತವಾಗಿವೆ. ನಾನು ಭೇಟಿಯಾದ ನಿಮ್ಮೆಲ್ಲರ ಮುಖಗಳು ನನ್ನ ಮನಸ್ಸಿನಲ್ಲಿ ಮಿನುಗುತ್ತಲೇ ಇರುತ್ತವೆ. ಪ್ರೀತಿ ಮತ್ತು ಕಾಳಜಿಯನ್ನು ತೋರಿಸುವ ನನ್ನ ಪ್ರೀತಿಪಾತ್ರರ ಬಗ್ಗೆ ಹೆಚ್ಚು ಯೋಚಿಸುತ್ತಿದ್ದಂತೆ, ನನ್ನ ಹೃದಯ ಭಾರವಾಗುತ್ತದೆ' ಎಂದು ಅವರು ಹೇಳಿದರು.
'ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖಿಸುತ್ತಿರುವ ನಿಮಗೆ ನೋವಿನೊಂದಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತಾ, ನಾನು ನಿಮ್ಮ ಹೃದಯಗಳಿಗೆ ಹತ್ತಿರವಾಗಿ ನಿಂತು ಈ ಅಪಾರ ದುಃಖವನ್ನು ಹಂಚಿಕೊಳ್ಳುತ್ತೇನೆ. ಇದು ನಿಜಕ್ಕೂ ನಮಗೆ ಸರಿಪಡಿಸಲಾಗದ ನಷ್ಟ. ಯಾರು ಸಾಂತ್ವನದ ಮಾತುಗಳನ್ನು ಹೇಳಿದರೂ, ನಮ್ಮ ಪ್ರೀತಿಪಾತ್ರರ ನಷ್ಟ ಅಸಹನೀಯ. ಆದರೂ, ನಿಮ್ಮ ಕುಟುಂಬದ ಸದಸ್ಯನಾಗಿ, ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿ ಕುಟುಂಬಕ್ಕೆ 20 ಲಕ್ಷ ರೂಪಾಯಿಗಳನ್ನು ಮತ್ತು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ 2 ಲಕ್ಷ ರೂಪಾಯಿಗಳನ್ನು ನೀಡಲು ನಾನು ನಿರ್ಧರಿಸಿದ್ದೇನೆ' ಎಂದು ಟಿವಿಕೆ ಮುಖ್ಯಸ್ಥರೂ ಆಗಿರುವ ವಿಜಯ್ ತಿಳಿಸಿದ್ದಾರೆ.
'ಇಂತಹ ನಷ್ಟದ ಸಂದರ್ಭದಲ್ಲಿ ಈ ಮೊತ್ತವು ನಷ್ಟವನ್ನು ತುಂಬುವುದಿಲ್ಲ ಎಂಬುದು ನಿಜ. ಆದರೂ, ಈ ಕ್ಷಣದಲ್ಲಿ, ನಿಮ್ಮ ಕುಟುಂಬಕ್ಕೆ ಸೇರಿದವನಾಗಿ, ನನ್ನ ಪ್ರೀತಿಪಾತ್ರರಾದ ನಿಮ್ಮೊಂದಿಗೆ ಭಾರವಾದ ಹೃದಯದಿಂದ ನಿಲ್ಲುವುದು ನನ್ನ ಕರ್ತವ್ಯ. ಅದೇ ರೀತಿ, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಮ್ಮ ಎಲ್ಲ ಪ್ರೀತಿಪಾತ್ರರು ಬೇಗನೆ ಚೇತರಿಸಿಕೊಂಡು ಮನೆಗೆ ಮರಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಚಿಕಿತ್ಸೆ ಪಡೆಯುತ್ತಿರುವವರಿಗೆ ತಮಿಳಿಗ ವೆಟ್ರಿ ಕಳಗಂ ಅಗತ್ಯವಿರುವ ಎಲ್ಲ ಬೆಂಬಲವನ್ನು ದೃಢವಾಗಿ ನೀಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ' ಎಂದು ಅವರು ಹೇಳಿದರು.
ಶನಿವಾರ ಸಂಜೆ ಕರೂರಿನಲ್ಲಿ ನಡೆದ ಟಿವಿಕೆ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 39 ಜನರು ಸಾವಿಗೀಡಾಗಿದ್ದಾರೆ ಮತ್ತು 95 ಜನರು ಗಾಯಗೊಂಡಿದ್ದಾರೆ.
ಇದಕ್ಕೂ ಮೊದಲು, ತಮಿಳುನಾಡಿನ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಮೃತರಿಗೆ ತಲಾ 10 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಸಂತ್ರಸ್ತರ ಕುಟುಂಬದವರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಘೋಷಿಸಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
Advertisement