

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನ್ಯಾಯಾಂಗ ಅಧಿಕಾರಿಗಳ ಮೇಲೆ ನಡೆದ ದಾಳಿಯನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳ ಸುರಕ್ಷತೆಗಾಗಿ ಕೇಂದ್ರ ಸಶಸ್ತ್ರ ಪಡೆಗಳನ್ನು (CAPF) ನಿಯೋಜಿಸಲು ಸೂಚನೆ ನೀಡಿದೆ.
ಕೋಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಪತ್ರ ಬರೆದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಇಂದು ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠವು, ಈ ಘಟನೆಯು ನ್ಯಾಯಾಂಗ ಅಧಿಕಾರಿಗಳನ್ನು ಹಿಂಸಿಸಲು ಮಾತ್ರವಲ್ಲದೆ ಈ ನ್ಯಾಯಾಲಯದ ಅಧಿಕಾರವನ್ನು ಪ್ರಶ್ನಿಸಲು ಮಾಡಿದ ಲಜ್ಜೆಗೆಟ್ಟ ಪ್ರಯತ್ನವಾಗಿದೆ ಎಂದು ಕಿಡಿಕಾರಿದೆ.
ಪಶ್ಚಿಮ ಬಂಗಾಳ ಅತ್ಯಂತ ಧ್ರುವೀಕರಣಗೊಂಡಿರುವ ರಾಜ್ಯವಾಗಿದೆ. ನ್ಯಾಯಾಂಗದ ಅಧಿಕಾರಿಗಳನ್ನು ಒತ್ತೆ ಇರಿಸಿಕೊಂಡಿದ್ದು ನ್ಯಾಯಾಂಗದ ಮೇಲೆ ನಡೆದ ವ್ಯವಸ್ಥಿತ ದಾಳಿ. ರಾಜ್ಯದಲ್ಲಿ ಅರಾಜಕತೆಯನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಈ ಘಟನೆಯು ಕೇವಲ ಪ್ರತಿಭಟನೆಯಲ್ಲ, ಬದಲಿಗೆ ನ್ಯಾಯಾಂಗ ಅಧಿಕಾರಿಗಳ ಮನೋಬಲ ಕುಂದಿಸಲು ಮತ್ತು ಚುನಾವಣಾ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ನಡೆಸಿದ ಪೂರ್ವಯೋಜಿತ ಮತ್ತು ಸಂಘಟಿತ ಪ್ರಯತ್ನ ಎಂದು ಅಭಿಪ್ರಾಯಪಟ್ಟು ಚಾಟಿ ಬೀಸಿದೆ.
ಅಲ್ಲದೆ, ಚುನಾವಣಾ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆಗಾಗಿ ತಕ್ಷಣವೇ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸುವಂತೆಯೂ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
ರಾಜ್ಯ ಸರ್ಕಾರವು ತನ್ನ ಕರ್ತವ್ಯದಿಂದ ವಿಮುಖವಾಗಿದೆ ಎಂದು ಹೇಳಿದ ಕೋರ್ಟ್ ಅಧಿಕಾರಿಗಳಿಗೆ ರಕ್ಷಣೆ ನೀಡಲು ವಿಫಲರಾಗಿದ್ದಕ್ಕೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರಿಗೆ ಸುಪ್ರೀಂ ಕೋರ್ಟ್ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಈ ದಾಳಿಯ ಬಗ್ಗೆ ಕೇಂದ್ರೀಯ ತನಿಖಾ ದಳ(CBI) ಅಥವಾ ರಾಷ್ಟ್ರೀಯ ತನಿಖಾ ದಳ(NIA) ಸ್ವತಂತ್ರ ಸಂಸ್ಥೆಗಳಿಂದ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ (Election commission) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಇದೇ ವೇಳೆ ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹಾಕಿದ್ದೇ ಈ ಪ್ರತಿಭಟನೆಗೆ ಕಾರಣವಾಗಿದೆ ಎಂಬ ಮಾಧ್ಯಮಗಳ ವರದಿಗಳನ್ನೂ ಉಲ್ಲೇಖಿಸಿರುವ ನ್ಯಾಯಾಲಯ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಯ ಅನುಪಸ್ಥಿತಿಯನ್ನು ಟೀಕಿಸಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ತಲುಪಲಿಲ್ಲ ಮತ್ತು ನ್ಯಾಯಮೂರ್ತಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರು ಪೊಲೀಸ್ ಮಹಾನಿರ್ದೇಶಕರು ಮತ್ತು ಗೃಹ ಕಾರ್ಯದರ್ಶಿಗೆ ಕರೆ ಮಾಡಬೇಕಾಯಿತು. ನಂತರ ಅವರು ಮುಖ್ಯ ನ್ಯಾಯಾಧೀಶರ ನಿವಾಸಕ್ಕೆ ಬಂದರು. ನ್ಯಾಯಾಂಗ ಅಧಿಕಾರಿಗಳ ಮಧ್ಯಸ್ಥಿಕೆಯ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಮಧ್ಯರಾತ್ರಿ ಬಿಡುಗಡೆ ಮಾಡಿ, ಹೋಗುವ ವೇಳೆ ಅಧಿಕಾರಿಗಳ ವಾಹನಗಳ ಮೇಲೆ ತಲ್ಲು ತೂರಾಟ, ಕೋಲುಗಳಿಂದ ದಾಳಿ ನಡೆದಿವೆ. ತಮ್ಮ ಕುಟುಂಬಕ್ಕೆ ಬೆದರಿಕೆಯ ಬಗ್ಗೆ ಯಾವುದೇ ಅನುಮಾನವಿರುವ ನ್ಯಾಯಾಂಗ ಅಧಿಕಾರಿಯ ನಿವಾಸದ ಮೇಲೆ ಚುನಾವಣಾ ಆಯೋಗವು ಪಡೆಗಳನ್ನು ನಿಯೋಜಿಸಬೇಕು. ನ್ಯಾಯಾಂಗ ಅಧಿಕಾರಿಗಳಿಗೆ ವಹಿಸಲಾಗಿರುವ ಕಾರ್ಯದ ಸುರಕ್ಷಿತ ಕಾರ್ಯನಿರ್ವಹಣೆಗಾಗಿ ಇಸಿಐ ಮತ್ತು ರಾಜ್ಯ ಸರ್ಕಾರವು ಎಲ್ಲಾ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಇದೇ ವೇಳೆ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಕೈಗೊಂಡ ಕ್ರಮಗಳ ಕುರಿತು ವರದಿಯನ್ನು ಸಲ್ಲಿಸಲು ಸೂಚಿಸಿರುವ ನ್ಯಾಯಾಲಯ, ಮುಖ್ಯ ಕಾರ್ಯದರ್ಶಿ, ಡಿಜಿಪಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್‌ಎಸ್‌ಪಿಗಳಿಗೆ ಕ್ರಮ ಕೈಗೊಳ್ಳದಿರಲು ಕಾರಣ ತಿಳಿಸುವಂತೆ ಸೂಚಿಸಿ ಏಪ್ರಿಲ್ 6 ರಂದು ಆನ್‌ಲೈನ್‌ನಲ್ಲಿ ಹಾಜರಿರುವಂತೆ ನಿರ್ದೇಶನ ನೀಡಿದೆ.
Advertisement