

ನವದೆಹಲಿ: ಶುಕ್ರವಾರ ಸಂಸತ್ ಅಧಿವೇಶನ ಕೆಲ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದ್ದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಮಾತುಗಳ ಮೂಲಕ ಇಡೀ ಸದನವನ್ನು ಕೆಲಕಾಲ ನಗೆಗಡಲಲ್ಲಿ ತೇಲಿಸಿದರು.
ಹೌದು.. ರಾಹುಲ್ ಗಾಂಧಿ ಶುಕ್ರವಾರ ಮಹಿಳೆಯರ ಕುರಿತು ಮಾತನಾಡುತ್ತಾ ತಮ್ಮ ಕಾಲು ತಾವೆ ಎಳೆದುಕೊಂಡು ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದರು.
ಪ್ರಮುಖವಾಗಿ ತಮ್ಮ ಸಹೋದರಿ ಪ್ರಿಯಾಂಕಾ ವಾದ್ರಾ ಕುರಿತು ಮಾತನಾಡಿದ ರಾಹುಲ್ ಗಾಂಧಿ, 'ನಾನು 20 ವರ್ಷದಲ್ಲಿ ಮಾಡಲಾಗದ್ದನ್ನು ನನ್ನ ತಂಗಿ 5 ನಿಮಿಷದಲ್ಲಿ ಮಾಡಿ ತೋರಿದಳು' ಎಂದು ಹೇಳಿದರು.
ಗುರುವಾರ ಲೋಕಸಭೆಯಲ್ಲಿ ತಮ್ಮ ಸಹೋದರಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಮಾಡಿದ ಭಾಷಣವನ್ನು ಶ್ಲಾಘಿಸಿದ ರಾಹುಲ್ ಗಾಂಧಿ, "ನನ್ನ 20 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಮಾಡಲು ಸಾಧ್ಯವಾಗದ ಸಾಧನೆಯನ್ನು ನನ್ನ ಸಹೋದರಿ ಐದು ನಿಮಿಷಗಳಲ್ಲಿ ಸಾಧಿಸುವುದನ್ನು ನಿನ್ನೆ ನಾನು ನೋಡಿದೆ. ಆಕೆ ಅಮಿತ್ ಶಾ ಅವರನ್ನು ನಗುವಂತೆ ಮಾಡಿದಳು ಎಂದರು. ಇದಕ್ಕೆ ಇಡೀ ಸದನ ನಗೆಗಡಲಲ್ಲಿ ತೇಲಿತು.
ನನಗೂ-ಪ್ರಧಾನಿ ಮೋದಿಗೂ ಪತ್ನಿ ಸಮಸ್ಯೆ ಇಲ್ಲ..
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ತಮಗೆ "ಪತ್ನಿಯ ಸಮಸ್ಯೆ" ಇಲ್ಲ. ಆದಾಗ್ಯೂ ತಾವು ತಮ್ಮ ಜೀವನದಲ್ಲಿ ಮಹಿಳೆಯರಿಂದ ಸಾಕಷ್ಟು ಕಲಿತಿದ್ದೇವೆ ಎಂದು ಒತ್ತಿ ಹೇಳಿದರು.
ಮಹಿಳಾ ಕೋಟಾ ಕಾನೂನಿಗೆ ತಿದ್ದುಪಡಿಗಳು ಮತ್ತು ಗಡಿ ನಿರ್ಣಯ ಆಯೋಗವನ್ನು ಸ್ಥಾಪಿಸಲು ಮಂಡಿಸಲಾದ ಮೂರು ಮಸೂದೆಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ, 'ಮಹಿಳೆಯರು ರಾಷ್ಟ್ರೀಯ ಕಲ್ಪನೆ ಮತ್ತು ರಾಷ್ಟ್ರೀಯ ದೃಷ್ಟಿಕೋನದಲ್ಲಿ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಹೇಳಿದರು.
"ಈ ಕೋಣೆಯಲ್ಲಿರುವ ನಾವೆಲ್ಲರೂ ನಮ್ಮ ಜೀವನದಲ್ಲಿ ಮಹಿಳೆಯರಿಂದ ಪ್ರಭಾವಿತರಾಗಿದ್ದೇವೆ. ಕಲಿಸಲ್ಪಟ್ಟಿದ್ದೇವೆ ಮತ್ತು ಅವರಿಂದ ಬಹಳಷ್ಟು ಕಲಿತಿದ್ದೇವೆ. ತಾಯಂದಿರು, ಸಹೋದರಿಯರು, ಹೆಂಡತಿಯರ ರೂಪದಲ್ಲಿ ಅವರು ನಮಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ" ಎಂದು ಗಾಂಧಿ ಹೇಳಿದರು.
ಅಂತೆಯೇ "ಖಂಡಿತ, ಪ್ರಧಾನಿ ಮತ್ತು ನನಗೆ ಹೆಂಡತಿಯ ಸಮಸ್ಯೆ ಇಲ್ಲ, ಆದ್ದರಿಂದ ನಮಗೆ ಆ ಮಾಹಿತಿ ಸಿಗುವುದಿಲ್ಲ, ಆದರೆ ನಮಗೆ ನಮ್ಮ ತಾಯಂದಿರು ಮತ್ತು ಸಹೋದರಿಯರು ಇದ್ದಾರೆ" ಎಂದು ಅವರು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಹಗುರವಾದ ಹೇಳಿಕೆಯನ್ನು ಉಲ್ಲೇಖಿಸುತ್ತಾ ಹೇಳಿದರು.
ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾಡಿದಂತೆ ನಾನು ಹೆಂಡತಿಗಾಗಿ ಕವಿತೆ ಬರೆಯದ ಕಾರಣ ಮನೆಯಲ್ಲಿ ನನಗೆ ಬೈದರು ಎಂದು ರಾಹುಲ್ ಗಾಂಧಿ ಹಾಸ್ಯಾತ್ಮಕವಾಗಿ ಹೇಳಿದರು.
Advertisement