

ಲಖನೌ: ಮಹತ್ವದ ಬೆಳವಣಿಗೆಯೊಂದರಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದ್ವಿಪೌರತ್ವ ಹೊಂದಿದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಎಫ್‌ಐಆರ್ ದಾಖಲಿಸುವಂತೆ ಶುಕ್ರವಾರ ತಾನೇ ನೀಡಿದ್ದ ಆದೇಶವನ್ನು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಶನಿವಾರ ತಡೆಹಿಡಿದಿದೆ.
ರಾಹುಲ್ ಗಾಂಧಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಬಿಜೆಪಿ ಕಾರ್ಯಕರ್ತ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್, ಎಫ್ಐಆರ್ ದಾಖಲಿಸುವಂತೆ ನಿನ್ನೆ ಆದೇಶಿಸಿತ್ತು. ಆದರೆ ಇಂದು ಅಂತಿಮ ಆದೇಶವನ್ನು ಹೈಕೋರ್ಟ್ ತಡೆ ಹಿಡಿದಿದೆ.
ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರನ್ನು ಒಳಗೊಂಡ ಹೈಕೋರ್ಟ್ ಪೀಠ, ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶಿಸಿತ್ತು. ಟೈಪ್ ಮಾಡಿ ಸಹಿ ಮಾಡುವ ಮೊದಲು ಪೀಠ, ಈ ಆದೇಶವನ್ನು ತಡೆ ಹಿಡಿದಿದೆ.
ಇಂದು ಅಪ್‌ಲೋಡ್ ಮಾಡಲಾದ ತನ್ನ ಏಪ್ರಿಲ್ 17ರ ಆದೇಶದಲ್ಲಿ, ಸಂಭಾವ್ಯ ಆರೋಪಿಗೆ ವಿಚಾರಣೆಗೆ ಅವಕಾಶ ನೀಡದ ಹೊರತು ಅರ್ಜಿಯ ಕುರಿತು ಆದೇಶ ನೀಡವುದಿಲ್ಲ. ಆರೋಪಿಗೆ ನೋಟಿಸ್ ನೀಡದೆ, ಎಫ್ಐಆರ್ ದಾಖಲಿಸುವುದು ತಪ್ಪಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಎರಡು ಪುಟಗಳ ಆದೇಶದ ಪ್ರಕಾರ, ಜಗನ್ನಾಥ್ ವರ್ಮಾ ಮತ್ತು ಇತರರು vs ಯುಪಿ ಸರ್ಕಾರ ಹಾಗೂ ಇತರರು ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನ 2014 ರ ಪೂರ್ಣ ಪೀಠದ ತೀರ್ಪನ್ನು ನೋಡಿದ ನಂತರ ಪೀಠವು ತೀರ್ಪನ್ನು ತಡೆಹಿಡಿಯಲು ನಿರ್ಧರಿಸಿತು.
ರಾಹುಲ್ ಗಾಂಧಿಗೆ ನೋಟಿಸ್ ನೀಡದೆ ಈ ಅರ್ಜಿಯನ್ನು ನಿರ್ಧರಿಸಬಾರದು ಎಂದು ಗಮನಿಸಿದ ನ್ಯಾಯಾಲಯವು, ಏಪ್ರಿಲ್ 20ಕ್ಕೆ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ.
ಕರ್ನಾಟಕ ಮೂಲದ ಬಿಜೆಪಿ ಕಾರ್ಯಕರ್ತ ಎಸ್. ವಿಘ್ನೇಶ್ ಶಿಶಿರ್ ಅವರು ರಾಹುಲ್ ಗಾಂಧಿ ದ್ವಿ ಪೌರತ್ವ ಹೊಂದಿದ್ದಾರೆಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ಈ ಮೊದಲು ಜನವರಿ 28 ರಂದು ಲಖೌನ ವಿಶೇಷ ನ್ಯಾಯಾಲಯವು ರಾಹುಲ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದ ವಿಘ್ನೇಶ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Advertisement